ಮೂಡುಬಿದಿರೆ: ಬನ್ನಡ್ಕ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿಬಿಎಲ್ ಸಂಸ್ಥೆಗೆ ಸೇರಿದ ಲಾರಿ ಹಾಗೂ ಟ್ಯಾಂಕರ್‌ಗಳನ್ನು ರಸ್ತೆ ಬದಿಯಲ್ಲಿ ಅಪಾಯಕಾರಿಯಾಗಿ ನಿಲ್ಲಿಸಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ಒಂದು ವಾರದಿಂದ ಟ್ಯಾಂಕರ್‌ವೊಂದು ಅದೇ ಸ್ಥಳದಲ್ಲಿ ನಿಂತಿದ್ದರೂ ಅದನ್ನು ತೆರವುಗೊಳಿಸದಿರುವುದು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅದರ ಸಮೀಪ ಮತ್ತೊಂದು ಲಾರಿಯನ್ನೂ ನಿಲ್ಲಿಸಿರುವುದರಿಂದ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರು ಆತಂಕದ ನಡುವೆ ಪ್ರಯಾಣಿಸುವಂತಾಗಿದೆ.

ಕತ್ತಲಲ್ಲಿ ಹೆಚ್ಚಿದ ಅಪಘಾತದ ಭೀತಿ ಹೆದ್ದಾರಿಯ ಸುಮಾರು 100 ಮೀಟರ್ ವ್ಯಾಪ್ತಿಯಲ್ಲಿ ರಸ್ತೆಯ ಎಡ ಹಾಗೂ ಬಲ ಬದಿಗಳಲ್ಲಿ ಭಾರೀ ವಾಹನಗಳನ್ನು ನಿಲ್ಲಿಸಲಾಗಿದೆ. ಈ ಭಾಗದಲ್ಲಿ ಬೀದಿ ದೀಪಗಳಿಲ್ಲದ ಕಾರಣ ರಾತ್ರಿ ವೇಳೆ ಸಂಪೂರ್ಣ ಕತ್ತಲೆ ಆವರಿಸುತ್ತದೆ. ವೇಗವಾಗಿ ಸಂಚರಿಸುವ ವಾಹನಗಳಿಗೆ ರಸ್ತೆ ಬದಿಯಲ್ಲಿ ನಿಂತಿರುವ ಲಾರಿ ಮತ್ತು ಟ್ಯಾಂಕರ್‌ಗಳು ಕೊನೆಯ ಕ್ಷಣದವರೆಗೆ ಗೋಚರಿಸದ ಪರಿಸ್ಥಿತಿ ನಿರ್ಮಾಣವಾಗಿದ್ದು, ಯಾವುದೇ ಕ್ಷಣದಲ್ಲಿ ಗಂಭೀರ ಅಪಘಾತ ಸಂಭವಿಸುವ ಭೀತಿ ಎದುರಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಸುರಕ್ಷತಾ ನಿಯಮಗಳ ಉಲ್ಲಂಘನೆ ಆರೋಪ ಈ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಇಂತಹ ಪ್ರಮುಖ ರಸ್ತೆಯಲ್ಲೇ ದೀರ್ಘಕಾಲ ಭಾರೀ ವಾಹನಗಳನ್ನು ನಿಲ್ಲಿಸಿರುವುದು ಸುರಕ್ಷತಾ ನಿಯಮಗಳ ಉಲ್ಲಂಘನೆಯಾಗಿದ್ದು, ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡಿದಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಎಚ್ಚರಿಕೆ ವ್ಯವಸ್ಥೆಯೇ ಇಲ್ಲ ಡಿಬಿಎಲ್ ಸಂಸ್ಥೆ ರಸ್ತೆ ಕಾಮಗಾರಿ ನಡೆಸುವ ವೇಳೆ ಸುರಕ್ಷತಾ ಕ್ರಮಗಳಿಗೆ ಆದ್ಯತೆ ನೀಡದೆ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಅಪಾಯ ಸೂಚನಾ ಫಲಕಗಳು, ಪ್ರತಿಫಲಿತ ಬ್ಯಾರಿಕೇಡ್‌ಗಳು ಹಾಗೂ ಎಚ್ಚರಿಕೆ ದೀಪಗಳ ಸಮರ್ಪಕ ವ್ಯವಸ್ಥೆ ಇಲ್ಲದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ತಕ್ಷಣ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ ಪದೇ ಪದೇ ಇದೇ ರೀತಿಯ ಘಟನೆಗಳು ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಡಿಬಿಎಲ್ ಸಂಸ್ಥೆ ಕೂಡಲೇ ಎಚ್ಚೆತ್ತುಕೊಳ್ಳಬೇಕು. ರಸ್ತೆ ಬದಿಯಲ್ಲಿ ನಿಲ್ಲಿಸಿರುವ ಲಾರಿ ಮತ್ತು ಟ್ಯಾಂಕರ್‌ಗಳನ್ನು ತಕ್ಷಣ ತೆರವುಗೊಳಿಸಿ, ರಾತ್ರಿ ವೇಳೆಯ ಸಂಚಾರಕ್ಕೆ ಅಗತ್ಯ ಸುರಕ್ಷತಾ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

'ಜನರ ಜೀವದೊಂದಿಗೆ ಚೆಲ್ಲಾಟ ಬೇಡ' ಸ್ಥಳೀಯರೊಬ್ಬರು, "ಜನರ ತಾಳ್ಮೆಯನ್ನು ಪರೀಕ್ಷಿಸಬೇಡಿ. ಡಿಬಿಎಲ್ ಕಂಪನಿಯೇ, ತಕ್ಷಣ ನಿಮ್ಮ ಕೆಲಸದ ವೈಖರಿಯನ್ನು ತಿದ್ದಿಕೊಳ್ಳಿ ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ. ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ಜನರ ಪ್ರಾಣವನ್ನು ಅಪಾಯಕ್ಕೆ ತಳ್ಳಬೇಡಿ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.