ಮೂಡುಬಿದಿರೆ: ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಎರಡು ಸಿಮೆಂಟ್ ಬೆಂಚ್‌ಗಳನ್ನು ತೆರವುಗೊಳಿಸಿರುವ ಆರೋಪ ಮೂಡುಬಿದಿರೆ ಖಾಸಗಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಪುರಸಭೆಯ ಅಧೀನದಲ್ಲಿರುವ ಬಾಡಿಗೆ ಕಟ್ಟಡದಲ್ಲಿ ಆರಂಭವಾಗಿರುವ ಹೋಟೆಲ್ ಕಾಮಗಾರಿ ವೇಳೆ ಈ ಬೆಂಚ್‌ಗಳನ್ನು ತೆಗೆದುಹಾಕಲಾಗಿದ್ದು, ಸಾರ್ವಜನಿಕ ಸೌಲಭ್ಯವನ್ನೇ ಕಡಿತಗೊಳಿಸಲಾಗಿದೆ ಎಂದು ಸಾರ್ವಜನಿಕರು ಹಾಗೂ ಇತರ ಬಾಡಿಗೆದಾರರು ಆರೋಪಿಸಿದ್ದಾರೆ.
ಪುರಸಭೆ ಸಾರ್ವಜನಿಕ ಹರಾಜಿನ ಮೂಲಕ ಬಾಡಿಗೆಗೆ ನೀಡಿದ್ದ ಕಟ್ಟಡದಲ್ಲಿ ಹೋಟೆಲ್ ಆರಂಭಿಸುವ ಸಿದ್ಧತೆ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಯಾಣಿಕರ ಬಳಕೆಯಲ್ಲಿದ್ದ ಎರಡು ಸಿಮೆಂಟ್ ಬೆಂಚ್‌ಗಳನ್ನು ತೆರವುಗೊಳಿಸಲಾಗಿದೆ ಎನ್ನಲಾಗಿದೆ. ಈಗಾಗಲೇ ಬಸ್ ನಿಲ್ದಾಣದಲ್ಲಿ ಸೀಮಿತ ಸಂಖ್ಯೆಯ ಕಲ್ಲಿನ ಬೆಂಚ್‌ಗಳಷ್ಟೇ ಇರುವುದರಿಂದ ವಯೋವೃದ್ಧರು, ಮಹಿಳೆಯರು ಹಾಗೂ ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ನಿಂತುಕೊಂಡೇ ಬಸ್‌ಗಾಗಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಹೋಟೆಲ್ ಮುಂಭಾಗದಲ್ಲಿರುವ ಸಾರ್ವಜನಿಕ ವಾಹನ ನಿಲುಗಡೆ ಸ್ಥಳದಲ್ಲಿ ಕುರ್ಚಿಗಳನ್ನು ಇರಿಸಿ, ಹೋಟೆಲ್‌ಗೆ ಆಗಮಿಸುವ ಗ್ರಾಹಕರ ಅನುಕೂಲಕ್ಕಾಗಿ ಬಳಸಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಇದರಿಂದ ಸಾರ್ವಜನಿಕರು ಹಾಗೂ ಬಸ್ ನಿಲ್ದಾಣದಲ್ಲಿರುವ ಇತರ ಬಾಡಿಗೆದಾರರಿಗೆ ವಾಹನ ನಿಲುಗಡೆ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ ಎಂದು ಹೇಳಲಾಗಿದೆ.
ಭರವಸೆ ಇನ್ನೂ ಈಡೇರಿಲ್ಲ ಕೆಲವು ತಿಂಗಳ ಹಿಂದೆ ಪುರಸಭೆ, ಪೊಲೀಸ್ ಇಲಾಖೆ, ಖಾಸಗಿ ಬಸ್ ಮಾಲಕರ ಸಂಘ ಹಾಗೂ ಬಾಡಿಗೆದಾರರ ಪ್ರತಿನಿಧಿಗಳ ಸಭೆಯಲ್ಲಿ ಬಸ್ ನಿಲ್ದಾಣದ ಅತಿಕ್ರಮಣ ತೆರವುಗೊಳಿಸಿ ವಾಹನ ನಿಲುಗಡೆ ವ್ಯವಸ್ಥೆ ಸುಧಾರಿಸುವ ಕುರಿತು ಚರ್ಚೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಆ ಭರವಸೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ತಾರತಮ್ಯವಿಲ್ಲದ ಕ್ರಮಕ್ಕೆ ಒತ್ತಾಯ ಇಂದಿರಾ ಗಾಂಧಿ ಕಾಂಪ್ಲೆಕ್ಸ್‌ನಲ್ಲಿ ಹಲವು ವರ್ಷಗಳಿಂದ ಪುರಸಭೆಯ ನಿಯಮಗಳನ್ನು ಪಾಲಿಸಿಕೊಂಡು ವ್ಯವಹಾರ ನಡೆಸುತ್ತಿರುವ ಇತರ ಬಾಡಿಗೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೊಸದಾಗಿ ಆರಂಭವಾಗುತ್ತಿರುವ ಹೋಟೆಲ್‌ಗಾಗಿ ಎರಡು ಸಿಮೆಂಟ್ ಬೆಂಚ್‌ಗಳನ್ನು ತೆರವುಗೊಳಿಸಿರುವಂತೆ ಮುಂದಿನ ದಿನಗಳಲ್ಲಿ ಇತರ ಅಂಗಡಿಗಳ ಎದುರಿನ ಬೆಂಚ್‌ಗಳನ್ನೂ ತೆರವುಗೊಳಿಸಿದರೆ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಯಾವುದೇ ವ್ಯವಸ್ಥೆ ಉಳಿಯುವುದಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಪುರಸಭೆ ಎಲ್ಲ ಬಾಡಿಗೆದಾರರನ್ನು ಸಮಾನವಾಗಿ ಪರಿಗಣಿಸಿ, ನಿಯಮ ಉಲ್ಲಂಘನೆ ಅಥವಾ ಅತಿಕ್ರಮಣ ನಡೆಸುವವರ ವಿರುದ್ಧ ತಾರತಮ್ಯವಿಲ್ಲದೆ ಕ್ರಮ ಕೈಗೊಳ್ಳಬೇಕು. ನಿಯಮ ಉಲ್ಲಂಘನೆಯ ಆರೋಪಗಳಿದ್ದರೂ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳದಿರುವುದು ಸೂಕ್ತವಲ್ಲ ಎಂದು ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಾಧಿಕಾರಿ ಇಂದು. ಎಂ, ಬಸ್ ನಿಲ್ದಾಣದಲ್ಲಿರುವ ಅತಿಕ್ರಮಣ ತೆರವುಗೊಳಿಸಿ, ತೆರವುಗೊಳಿಸಲಾದ ಸಿಮೆಂಟ್ ಬೆಂಚ್‌ಗಳನ್ನು ಮರುಸ್ಥಾಪಿಸುವುದರ ಜೊತೆಗೆ ಸಾರ್ವಜನಿಕ ಪಾರ್ಕಿಂಗ್ ಸ್ಥಳವನ್ನು ಮೂಲ ಉದ್ದೇಶಕ್ಕೆ ಬಳಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.