ಮಾತೃತ್ವ ಆರೈಕೆಯ ಪರಂಪರೆಗೆ ರಾಷ್ಟ್ರೀಯ ಮನ್ನಣೆ: ಮೂಡುಬಿದಿರೆಯ ಅನುಷಾ ಆಚಾರ್ ಅವರ 'ಮಾವೇದಾಸ್'ಗೆ ನೀತಿ ಆಯೋಗದ ಗೌರವ- ರಾಷ್ಟ್ರಪತಿಯಿಂದ ಜುಲೈ 31ರಂದು ಸನ್ಮಾನ

ಮೂಡುಬಿದಿರೆ: ಬಾಣಂತಿಯ ಆರೈಕೆಯಲ್ಲಿ ಭಾರತೀಯ ಪರಂಪರೆಯ ಆಹಾರ ಪದ್ಧತಿಯನ್ನು ಆಧುನಿಕ ಜೀವನಶೈಲಿಗೆ ಹೊಂದುವಂತೆ ಪುನರುಜ್ಜೀವನಗೊಳಿಸುವ ಪ್ರಯತ್ನಕ್ಕೆ ಮೂಡುಬಿದಿರೆಯ ಅನುಷಾ ಆಚಾರ್ ಅವರಿಗೆ ರಾಷ್ಟ್ರೀಯ ಮಟ್ಟದ ಮನ್ನಣೆ ಲಭಿಸಿದೆ. ಭಾರತದ ನೀತಿ ಆಯೋಗದ ಅಟಲ್ ಇನ್ನೋವೇಶನ್ ಮಿಷನ್ (AIM) ವತಿಯಿಂದ ತಳಮಟ್ಟದ ನಾವೀನ್ಯತೆಗೆ ನೀಡಲಾಗುವ 2026ನೇ ಸಾಲಿನ ರಾಷ್ಟ್ರಮಟ್ಟದ ಗೌರವಕ್ಕೆ ಅನುಷಾ ಅವರ 'ಮಾವೇದಾಸ್' ಆಯ್ಕೆಯಾಗಿದ್ದು, ಇದೇ ಜುಲೈ 31ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಲಾಗುತ್ತಿದೆ. ದೇಶದ ವಿವಿಧ ರಾಜ್ಯಗಳಿಂದ 250ಕ್ಕೂ ಅಧಿಕ ನಾವೀನ್ಯತೆಯ ಸ್ಟಾರ್ಟ್‌ಅಪ್‌ಗಳು ಸ್ಪರ್ಧಿಸಿದ್ದ ಸಂದರ್ಭದಲ್ಲಿ ಅಂತಿಮವಾಗಿ ಆಯ್ಕೆಯಾದ 26 ಸಾಧಕರಲ್ಲಿ ಅನುಷಾ ಸ್ಥಾನ ಪಡೆದಿದ್ದಾರೆ. ಕರ್ನಾಟಕದಿಂದ ಆಯ್ಕೆಯಾದ ಕೆಲವೇ ಸಾಧಕರ ಪೈಕಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ ಇಬ್ಬರಲ್ಲಿ ಒಬ್ಬರಾಗಿರುವುದು ವಿಶೇಷ. ಮೂಲತಃ ಕುಂದಾಪುರದವರಾದ ಅನುಷಾ ಆಚಾರ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರೆ. ಉದ್ಯೋಗದ ಹಾದಿಗಿಂತ ಭಾರತೀಯ ಸಾಂಪ್ರದಾಯಿಕ ಆಹಾರ ಪದ್ಧತಿ, ವಿಶೇಷವಾಗಿ ಗರ್ಭಿಣಿ ಮತ್ತು ಬಾಣಂತಿಯ ಆರೈಕೆಯಲ್ಲಿ ಬಳಸುವ ಲೇಹ, ಸತ್ವ ಹಾಗೂ ಪೌಷ್ಟಿಕ ಆಹಾರಗಳ ಸಂರಕ್ಷಣೆ ಮತ್ತು ಪ್ರಸಾರದತ್ತ ಅವರು ಗಮನ ಹರಿಸಿದರು. ಹಿರಿಯ ತಲೆಮಾರಿನ ಅನುಭವವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಆರಂಭಿಸಿದ 'ಮಾವೇದಾಸ್' ಇಂದು ವಿಶಿಷ್ಟ ಗುರುತನ್ನು ಗಳಿಸಿದೆ. ಪ್ರಸ್ತುತ 'ಮಾವೇದಾಸ್' ಮೂಲಕ ಮೆಂತೆ ಸತ್ವ, ಬಾಣಂತಿ ಲೇಹ, ಬೆಳ್ಳುಳ್ಳಿ ಲೇಹ ಹಾಗೂ ಮೆಂತೆ ಲಡ್ಡು ಸೇರಿದಂತೆ ಹಲವು ಸಾಂಪ್ರದಾಯಿಕ ಆರೋಗ್ಯಕರ ಉತ್ಪನ್ನಗಳು ಜನರಿಗೆ ಲಭ್ಯವಾಗುತ್ತಿವೆ. ಮುಂದಿನ ದಿನಗಳಲ್ಲಿ ಶಿಶು ಆಹಾರ ಸೇರಿದಂತೆ ಇನ್ನಷ್ಟು ಪೌಷ್ಟಿಕ ಉತ್ಪನ್ನಗಳನ್ನು ಪರಿಚಯಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನೂ ಅನುಷಾ ಹೊಂದಿದ್ದಾರೆ. 2025ರ ಜುಲೈ 18ರಂದು ಆರಂಭವಾದ 'ಮಾವೇದಾಸ್' ಕೇವಲ ಒಂದು ವರ್ಷದಲ್ಲೇ ರಾಷ್ಟ್ರೀಯ ಮಟ್ಟದ ಮನ್ನಣೆಗೆ ಪಾತ್ರವಾಗಿರುವುದು ಅದರ ಗುಣಮಟ್ಟ ಮತ್ತು ನಾವೀನ್ಯತೆಯ ಪ್ರತೀಕವಾಗಿದೆ. ಹೆಸರಿನಲ್ಲೇ ಅಡಗಿರುವಂತೆ ತಾಯಿಯ ಆರೈಕೆ ಹಾಗೂ ಭಾರತೀಯ ಪರಂಪರೆಯ ಮೌಲ್ಯಗಳನ್ನು ಆಧುನಿಕ ರೂಪದಲ್ಲಿ ಸಮಾಜಕ್ಕೆ ತಲುಪಿಸುವ ಉದ್ದೇಶದಿಂದ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಅನುಷಾ ಆಚಾರ್ ಅವರು ಜಾಗತಿಕ ಮಟ್ಟದಲ್ಲಿ ಬಾಯ್ಲರ್ ಮತ್ತು ರೈಸ್ ಮಿಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಎಸ್.ಕೆ.ಎಫ್. ಉದ್ಯಮ ಸಮೂಹದ ಜಿ. ರಾಮಕೃಷ್ಣ ಆಚಾರ್ ಅವರ ಪುತ್ರ ಪ್ರಜ್ವಲ್ ಆಚಾರ್ ಅವರ ಪತ್ನಿ. ಅವರ ಪರಂಪರೆ ಸಂರಕ್ಷಣೆಯ ಕನಸು ಮತ್ತು ನಾವೀನ್ಯತೆಯ ಚಿಂತನೆಗೆ ಸಂದಿರುವ ಈ ರಾಷ್ಟ್ರೀಯ ಗೌರವ ಕರಾವಳಿಯ ಮಹಿಳಾ ಉದ್ಯಮಶೀಲತೆಗೆ ಮತ್ತೊಂದು ಹೆಮ್ಮೆಯ ಗರಿ ಸೇರ್ಪಡೆಗೊಳಿಸಿದೆ. ರಾಷ್ಟ್ರಮಟ್ಟದ ಈ ಸಾಧನೆ ಕರಾವಳಿಯ ಮಹಿಳೆಯರು ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ಉದ್ಯಮವನ್ನಾಗಿ ರೂಪಿಸಿ ದೇಶದ ಗಮನ ಸೆಳೆಯಬಹುದೆಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.

ವಿಶೇಷ ವರದಿ : ಎಂ. ಗಣೇಶ್ ಕಾಮತ್