ಮೂಡುಬಿದಿರೆ: ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ವತಿಯಿಂದ ಪರಿಸರ ಪ್ರೇಮಿ ರಸಕಾ ಜೈನ್ ಅವರ ಸ್ಮರಣಾರ್ಥ ಆಯೋಜಿಸಲಾದ ‘ಸಸ್ಯ ಶ್ಯಾಮಲಾ–2026’ ಸಾವಿರ ಗಿಡಗಳನ್ನು ನೆಡುವ ಹಾಗೂ ಹಂಚುವ ಹಸಿರು ಅಭಿಯಾನದ ಅಂಗವಾಗಿ ಕರಿಂಜೆ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ಸಸಿ ನೆಡುವ ಹಾಗೂ ಉಚಿತ ಸಸಿ ವಿತರಣಾ ಕಾರ್ಯಕ್ರಮ ನಡೆಯಿತು.
ಕರಿಂಜೆ ಶ್ರೀ ವೀರನಾರಾಯಣ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಕ್ತಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ್ರಕೃತಿಯೇ ಪರಬ್ರಹ್ಮನ ಪ್ರತ್ಯಕ್ಷ ರೂಪವಾಗಿದ್ದು, ಮರವನ್ನು ನೆಡುವುದು ಎಂದರೆ ಧರ್ಮದ ಬೀಜ ಬಿತ್ತಿದಂತೆಯೇ ಆಗುತ್ತದೆ. ಪ್ರತಿಯೊಂದು ಗಿಡವೂ ದೇವರ ಉಸಿರು, ಪ್ರತಿಯೊಂದು ಮರದ ನೆರಳೂ ದೈವಾನುಗ್ರಹದ ವಿಸ್ತಾರವಾಗಿದೆ. ಪರಿಸರ ಸಂರಕ್ಷಣೆ ಇಂದಿನ ಅಗತ್ಯ ಮಾತ್ರವಲ್ಲ, ಪ್ರತಿಯೊಬ್ಬರ ಆಧ್ಯಾತ್ಮಿಕ ಹೊಣೆಗಾರಿಕೆಯೂ ಆಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ, ‘ಹಸಿರೇ ಉಸಿರಾಗಲಿ… ನೆನಪೇ ಬೆಳಕಾಗಲಿ…’ ಎಂಬ ಸಂಕಲ್ಪವು ಕೇವಲ ಘೋಷಣೆಯಲ್ಲ, ಮುಂದಿನ ಪೀಳಿಗೆಗೆ ನೀಡುತ್ತಿರುವ ಜೀವದ ವಾಗ್ದಾನವಾಗಿದೆ. ಪರಿಸರವನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದ್ದು, ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೀತಿಯ ಬೀಜ ಮೊಳಕೆಯೊಡೆದರೆ ಸಮಾಜ ಹಸಿರಿನ ಸಂಸ್ಕೃತಿಯಿಂದ ಸಮೃದ್ಧವಾಗಲಿದೆ. ಪ್ರತಿಯೊಬ್ಬರೂ ಒಂದು ಗಿಡವನ್ನು ನೆಟ್ಟು ಅದನ್ನು ಮರವಾಗಿ ಬೆಳೆಸುವವರೆಗೆ ಪಾಲನೆ ಮಾಡಬೇಕು ಎಂದು ಕರೆ ನೀಡಿದರು.
ಅಭಿಯಾನದ ಅಂಗವಾಗಿ ಮಾವು, ಪೇರಳೆ, ನೆಲ್ಲಿಕಾಯಿ, ನೇರಳೆ, ಬೇವು ಸೇರಿದಂತೆ ಸುಮಾರು 50 ಬಗೆಯ ಫಲ ಹಾಗೂ ನೆರಳು ನೀಡುವ ಅಪರೂಪದ ಸಸಿಗಳನ್ನು ಭಕ್ತಾದಿಗಳು ಮತ್ತು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಯಿತು.
ಡಾ. ವಾದಿರಾಜ ಕಲ್ಲೂರಾಯ, ಸ್ವರೂಪ್ ಜೈನ್, ಅಶೋಕ್, ಪ್ರಶಾಂತ್ ಶೆಟ್ಟಿ, ರಂಜಿತಾ, ವಿಮಲಾ, ಹರ್ಷಿತ ಬಂಗೇರ, ಸಂಸ್ಥೆಯ ಬೋಧಕ ಮತ್ತು ಬೋಧಕೇತರ ವೃಂದ, ವಿದ್ಯಾರ್ಥಿಗಳು, ದೇವಸ್ಥಾನದ ಪದಾಧಿಕಾರಿಗಳು ಹಾಗೂ ನೂರಾರು ಪರಿಸರಾಸಕ್ತ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.