ಮೂಡುಬಿದಿರೆ: ಹುಟ್ಟಿದ ಎರಡು ತಿಂಗಳಲ್ಲೇ ಮಗಳ ಸಾವು, ಆ ಬಳಿಕ ಪತಿಯ ಸಾವಿನ ನೋವು, ಮತ್ತೊಂದೆಡೆ ಏಕೈಕ ಮಗನ ಜೀವ ಉಳಿಸಿಕೊಳ್ಳುವ ಹೋರಾಟ. ಮೂಡುಬಿದಿರೆ ಸಮೀಪದ ತಾಕೋಡೆಯ ಲಿಲ್ಲಿ ಡಿ'ಸೋಜ ಅವರ ಬದುಕು ಒಂದರ ಹಿಂದೆ ಒಂದರಂತೆ ಎದುರಾಗುತ್ತಿರುವ ಸಂಕಷ್ಟಗಳ ಸರಮಾಲೆಯಾಗಿದೆ.

ರಕ್ತದ ಕ್ಯಾನ್ಸರ್‌ಗೆ ಪತಿ ಮೆಲ್ವಿನ್ ರೊನಾಲ್ಡ್ ಮಸ್ಕರೇನ್ಹಸ್ ಅವರನ್ನು ಕಳೆದುಕೊಂಡ ಈ ತಾಯಿ, ಈಗ ಕಿಡ್ನಿ ವೈಫಲ್ಯ, ಪೈಲೊನೆಫ್ರೈಟಿಸ್, ಸೆಪ್ಸಿಸ್ ಹಾಗೂ ಸೆಪ್ಟಿಕ್ ಶಾಕ್‌ನಿಂದ ಬಳಲುತ್ತಿರುವ ಮಗ ಮೆಲ್ಬನ್ ಜೀವನ್ ಮಸ್ಕರೇನ್ಹಸ್ ಅವರ ಬದುಕನ್ನು ಉಳಿಸಿಕೊಳ್ಳಲು ಆಸ್ಪತ್ರೆಯಲ್ಲೇ ದಿನಗಳನ್ನು ಕಳೆಯುತ್ತಿದ್ದಾರೆ. ಮೆಲ್ಬನಿನ ಅವಳಿ ಸಹೋದರಿ ಎರಡು ತಿಂಗಳ ಮಗುವಾಗಿದ್ದಾಗ ಕಿಡ್ನಿ ವೈಫಲ್ಯದಿಂದಲೇ ಮೃತಪಟ್ಟಿದ್ದಾಳೆ. ಪ್ರಸ್ತುತ ಮಗನ ಚಿಕಿತ್ಸೆಯ ವೆಚ್ಚ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಕುಟುಂಬಕ್ಕೆ ಸಮಾಜದ ಸಹಾಯವೇ ಈಗ ಆಸರೆಯಾಗಿದೆ.

ಅನಾರೋಗ್ಯದ ನಡುವೆಯೂ ಸಾಧನೆ ಬಾಲ್ಯದಿಂದಲೇ ಆಸ್ಪತ್ರೆ ಮತ್ತು ಚಿಕಿತ್ಸೆಯ ನಡುವೆಯೇ ಬದುಕು ಸಾಗಿದ್ದರೂ ಮೆಲ್ಬನ್ ಶಿಕ್ಷಣದ ಮೇಲಿನ ಆಸಕ್ತಿ ಕಳೆದುಕೊಳ್ಳಲಿಲ್ಲ. ದ್ವಿತೀಯ ಪಿಯುಸಿಯಲ್ಲಿ ಶೇ.92ಕ್ಕೂ ಅಧಿಕ ಅಂಕಗಳನ್ನು ಗಳಿಸಿ ತನ್ನ ಪ್ರತಿಭೆಯನ್ನು ಸಾಬೀತುಪಡಿಸಿದ್ದಾನೆ. ಉತ್ತಮ ಶಿಕ್ಷಣ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕೆಂಬ ಕನಸನ್ನು ಹೊತ್ತಿದ್ದ ಈ ಯುವಕನ ಬದುಕು ಇಂದು ಆಸ್ಪತ್ರೆಯ ಹಾಸಿಗೆಯಲ್ಲೇ ಸೀಮಿತವಾಗಿದೆ. "ನಾನು ಗುಣಮುಖನಾಗಿ ಮತ್ತೆ ಓದಿ ಒಳ್ಳೆಯ ಜೀವನ ಕಟ್ಟಿಕೊಳ್ಳಬೇಕು. ನನ್ನ ಕನಸು ಇನ್ನೂ ಜೀವಂತವಾಗಿದೆ," ಎಂದು ಮೆಲ್ಬನ್ ಹೇಳುತ್ತಾನೆ.

ತಾಯಿಯ ಹೆಗಲಿನ ಮೇಲೆ ಎಲ್ಲ ಹೊರೆ ಪತಿ ನಿಧನದ ಬಳಿಕ ಕುಟುಂಬದ ಸಂಪೂರ್ಣ ಜವಾಬ್ದಾರಿ ಲಿಲ್ಲಿ ಡಿ'ಸೋಜಾ ಅವರ ಹೆಗಲಿಗೆ ಬಿದ್ದಿದೆ. ತಾಕೊಡೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಅವರು, ಮಗನನ್ನು ಕ್ಷಣಮಾತ್ರವೂ ಒಬ್ಬಂಟಿಯಾಗಿರಲು ಸಾಧ್ಯವಾಗದ ಕಾರಣ ಯಾವುದೇ ಉದ್ಯೋಗಕ್ಕೂ ತೆರಳಲಾಗುತ್ತಿಲ್ಲ. ಆಸ್ಪತ್ರೆಯ ವಾರ್ಡ್‌ ಅವರ ಬದುಕಿನ ಮತ್ತೊಂದು ಮನೆಯಾಗಿದೆ. ಚಿಕಿತ್ಸೆ ಮಾತ್ರವಲ್ಲ ದೈನಂದಿನ ಖರ್ಚು ಭರಿಸುವುದು ಕೂಡ ತಾಯಿಗೆ ಸವಾಲಾಗಿದೆ. "ನನ್ನ ಮಗ ಬದುಕಬೇಕು. ಮತ್ತೆ ಓದಬೇಕು. ದೇವರಲ್ಲಿ ನಾನು ಕೇಳುವುದು ಇದೇ," ಎಂದು ಕಣ್ಣೀರಿನ ನಡುವೆ ಲಿಲ್ಲಿ ಹೇಳುತ್ತಾರೆ.

ತಿಂಗಳಿಗೆ ₹15 ಸಾವಿರಕ್ಕೂ ಅಧಿಕ ಔಷಧಿ ವೆಚ್ಚ ಜೂನ್ 27ರಂದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಮೆಲ್ಬನ್‌ಗೆ ತುರ್ತು ಚಿಕಿತ್ಸೆ, ಬಲವಾದ ಆಂಟಿಬಯೋಟಿಕ್‌ಗಳು ಹಾಗೂ ಇನೋಟ್ರೋಪಿಕ್ ಬೆಂಬಲ ನೀಡಲಾಗಿದೆ. ವೈದ್ಯರ ಪ್ರಕಾರ, ಮುಂದಿನ ಜೀವನದುದ್ದಕ್ಕೂ ಇಮ್ಯುನೊಸಪ್ರೆಸೆಂಟ್ ಔಷಧಿಗಳನ್ನು ಸೇವಿಸಬೇಕಿದ್ದು, ಇದಕ್ಕೇ ಪ್ರತಿ ತಿಂಗಳು ₹12 ಸಾವಿರದಿಂದ ₹15 ಸಾವಿರದವರೆಗೆ ವೆಚ್ಚವಾಗಲಿದೆ. ಈಗಾಗಲೇ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚಾಗಿದ್ದು, ಕುಟುಂಬಕ್ಕೆ ದಿಕ್ಕು ತೋಚದಂತಂತಾಗಿದೆ.

ಮಾನವೀಯ ಕೈಗಳ ನಿರೀಕ್ಷೆಯಲ್ಲಿ ಕುಟುಂಬ ಮೆಲ್ಬನ್ ಕೇವಲ ರೋಗಿಯಲ್ಲ; ಅನಾರೋಗ್ಯದ ನಡುವೆಯೂ ಶಿಕ್ಷಣದಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿ. ಮಗನ ಭವಿಷ್ಯಕ್ಕಾಗಿ ತನ್ನ ಬದುಕನ್ನೇ ತ್ಯಾಗಮಯವಾಗಿಸಿಕೊಂಡ ತಾಯಿ ಇಂದು ಸಮಾಜದ ನೆರವಿನ ನಿರೀಕ್ಷೆಯಲ್ಲಿದ್ದಾರೆ. ಒಬ್ಬ ಯುವಕನ ಕನಸು ಮತ್ತೆ ಅರಳಲು, ಒಬ್ಬ ತಾಯಿಯ ಕಣ್ಣೀರು ಒಣಗಲು ಮತ್ತು ಸಂಕಷ್ಟದಲ್ಲಿರುವ ಕುಟುಂಬದಲ್ಲಿ ಭರವಸೆಯ ಬೆಳಕು ಮೂಡಲು ಸಮಾಜದ ಪ್ರತಿಯೊಂದು ಸಣ್ಣ ನೆರವೂ ದೊಡ್ಡ ಆಶಾಕಿರಣವಾಗಬಹುದು.

Bank Name: Karnataka Bank Ltd. * Branch: Moodabidri Branch * Savings Bank Account Number: 4822500102254201 * IFSC Code: KARB0000482 * Account Holder Name: Mrs. Lilly D Souza