ಮೂಡುಬಿದಿರೆ: ಸರ್ಕಾರಗಳು ಅಭಿವೃದ್ಧಿಯ ಭರವಸೆಗಳನ್ನು ನೀಡುತ್ತಲೇ ಇವೆ. ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯ ವಿಸ್ತರಣೆಗೆ ಕೋಟ್ಯಂತರ ರೂಪಾಯಿ ವೆಚ್ಚವಾಗುತ್ತಿದೆ ಎನ್ನುವ ಘೋಷಣೆಗಳು ಕೇಳಿಬರುತ್ತಿವೆ. ಆದರೆ ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೂಪಾಡಿಕಲ್ಲು 5 ಸೆಂಟ್ಸ್ ಕಾಲೋನಿ ನಿವಾಸಿಗಳ ಬದುಕು ಮಾತ್ರ ಇಂದಿಗೂ ಕೆಸರಿನ ಹಾದಿಯಲ್ಲೇ ಸಾಗುತ್ತಿದೆ.
ಸುಮಾರು 45 ವರ್ಷಗಳ ಇತಿಹಾಸ ಹೊಂದಿರುವ ಈ ರಸ್ತೆಗೆ ಇದುವರೆಗೆ ದಾಮರೀಕರಣದ ಭಾಗ್ಯ ದೊರೆತಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಮಳೆಗಾಲ ಆರಂಭವಾದರೆ ರಸ್ತೆ ಸಂಪೂರ್ಣ ಕೆಸರಿನಿಂದ ಆವೃತವಾಗುತ್ತಿದ್ದು, ನಿತ್ಯದ ಸಂಚಾರವೇ ನಿವಾಸಿಗಳಿಗೆ ಸವಾಲಾಗಿ ಪರಿಣಮಿಸಿದೆ.
ಶಾಲಾ ಮಕ್ಕಳಿಗೆ ಪ್ರತಿದಿನ ಪರೀಕ್ಷೆ ಮಳೆ ಸುರಿದರೆ ರಸ್ತೆ ಜಾರುವ ಕೆಸರಿನ ಹಾದಿಯಾಗಿ ಮಾರ್ಪಡುತ್ತದೆ. ಶಾಲೆಗೆ ತೆರಳುವ ಮಕ್ಕಳು ಬಿದ್ದು ಗಾಯಗೊಳ್ಳುವ ಭೀತಿಯಲ್ಲೇ ಪ್ರತಿದಿನ ಸಂಚರಿಸಬೇಕಾಗುತ್ತದೆ. ಮಹಿಳೆಯರು, ವಯೋವೃದ್ಧರು ಹಾಗೂ ಉದ್ಯೋಗಕ್ಕೆ ತೆರಳುವ ಸಾರ್ವಜನಿಕರೂ ಇದೇ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಅನಾರೋಗ್ಯದ ಸಂದರ್ಭದಲ್ಲಿ ತುರ್ತು ವಾಹನಗಳು ಸುಗಮವಾಗಿ ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿಯೂ ಉಂಟಾಗುತ್ತಿದೆ ಎಂದು ನಿವಾಸಿಗಳು ಹೇಳುತ್ತಾರೆ.
ತ್ಯಾಜ್ಯ ವಿಲೇವಾರಿ ಘಟಕದ ಸಂಪರ್ಕ ರಸ್ತೆ... ಆದರೆ ವಾಹನಗಳಿಗೆ ಸಂಕಷ್ಟ ಈ ರಸ್ತೆ ಗ್ರಾಮ ಪಂಚಾಯಿತಿಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದೆ. ಆದರೂ ರಸ್ತೆ ಹದಗೆಟ್ಟಿರುವ ಕಾರಣ ದ್ವಿಚಕ್ರ ವಾಹನಗಳು ಸೇರಿದಂತೆ ಇತರ ವಾಹನಗಳ ಸಂಚಾರ ದುಸ್ತರವಾಗಿದೆ. ಮಳೆಗಾಲದಲ್ಲಿ ಸಂಪೂರ್ಣ ಕೆಸರಿನಿಂದ ಆವೃತವಾಗುವ ರಸ್ತೆಯಲ್ಲಿ ಸಾರ್ವಜನಿಕರು ಜೀವದ ಹಂಗು ತೊರೆದು ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಮನವಿ ಮೇಲ್ಮನವಿ... ಸ್ಪಂದನೆ ಮಾತ್ರ ಶೂನ್ಯ ರಸ್ತೆ ದುರಸ್ತಿ ಹಾಗೂ ದಾಮರೀಕರಣಕ್ಕಾಗಿ ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ರಸ್ತೆ ಅಭಿವೃದ್ಧಿಯ ಭರವಸೆ ನೀಡುವ ಜನಪ್ರತಿನಿಧಿಗಳು, ಚುನಾವಣೆ ಮುಗಿದ ಬಳಿಕ ಸಾರ್ವಜನಿಕರ ಸಮಸ್ಯೆಗಳತ್ತ ಗಮನ ಹರಿಸುತ್ತಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ.
'ಅಭಿವೃದ್ಧಿ' ಬ್ಯಾನರ್‌ಗಳಲ್ಲಿ ಮಾತ್ರವೇ? ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಬ್ಯಾನರ್‌ಗಳು ಮತ್ತು ಘೋಷಣೆಗಳು ಕಾಣಿಸುತ್ತಿವೆ. ಆದರೆ ಜನರ ದೈನಂದಿನ ಬದುಕಿಗೆ ಅಗತ್ಯವಾದ ರಸ್ತೆ, ಸುರಕ್ಷಿತ ಸಂಚಾರ ಹಾಗೂ ಮೂಲಸೌಕರ್ಯಗಳ ಸಮಸ್ಯೆಗಳು ವರ್ಷಗಳ ಕಾಲ ಬಗೆಹರಿಯದೆ ಉಳಿದಿರುವುದು ಏಕೆ ಎಂಬ ಪ್ರಶ್ನೆಯನ್ನು ಸ್ಥಳೀಯರು ಎತ್ತುತ್ತಿದ್ದಾರೆ. ಅಭಿವೃದ್ಧಿಯ ಅಳತೆ ಕೇವಲ ಘೋಷಣೆಗಳಲ್ಲ, ಜನರ ಬದುಕಿನಲ್ಲಿ ಆಗುವ ಬದಲಾವಣೆಯಲ್ಲಿದೆ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.
ತಕ್ಷಣ ಕ್ರಮಕ್ಕೆ ಒತ್ತಾಯ ಪೂಪಾಡಿಕಲ್ಲು 5 ಸೆಂಟ್ಸ್ ಕಾಲೋನಿ ರಸ್ತೆ ಹಾಗೂ ಗ್ರಾಮ ಪಂಚಾಯಿತಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ತುರ್ತು ಆದ್ಯತೆಯ ಮೇರೆಗೆ ಅಭಿವೃದ್ಧಿಪಡಿಸಿ, ಗುಣಮಟ್ಟದ ದಾಮರೀಕರಣ ನಡೆಸಬೇಕು. ಸಾರ್ವಜನಿಕರು, ಶಾಲಾ ಮಕ್ಕಳು ಹಾಗೂ ವಾಹನ ಸವಾರರು ಸುರಕ್ಷಿತವಾಗಿ ಸಂಚರಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.
🔸 ಸುಮಾರು 45 ವರ್ಷಗಳಿಂದ ರಸ್ತೆಗೆ ದಾಮರೀಕರಣವಾಗಿಲ್ಲ ಎಂಬ ಸ್ಥಳೀಯರ ಆರೋಪ 🔸 ಮಳೆಗಾಲದಲ್ಲಿ ಕೆಸರಿನ ನಡುವೆ ಶಾಲಾ ಮಕ್ಕಳ ನಿತ್ಯ ಪರದಾಟ 🔸 ಮಹಿಳೆಯರು, ವಯೋವೃದ್ಧರು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಜೀವದ ಹಂಗು 🔸 ಗ್ರಾಮ ಪಂಚಾಯಿತಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ದುಸ್ಥಿತಿ 🔸 ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಅಸಮಾಧಾನ 🔸 ಚುನಾವಣೆ ವೇಳೆ ಭರವಸೆ... ನಂತರ ಸಮಸ್ಯೆ ಮರೆವಾಯಿತೇ ಎಂದು ಜನರ ಪ್ರಶ್ನೆ 🔸 ರಸ್ತೆ ಅಭಿವೃದ್ಧಿ ಹಾಗೂ ತುರ್ತು ದಾಮರೀಕರಣಕ್ಕೆ ನಿವಾಸಿಗಳ ಆಗ್ರಹ
ವಿಶೇಷ ವರದಿ : ಯಶೋಧರ ವಿ.ಬಂಗೇರ