ಮಂಗಳೂರು: ನೃತ್ಯ, ಫ್ಯಾಷನ್ ಮಾಡೆಲಿಂಗ್ ಹಾಗೂ ಅಭಿನಯ ಕ್ಷೇತ್ರದಲ್ಲಿ ಚಿಕ್ಕ ವಯಸ್ಸಿನಲ್ಲೇ ತನ್ನದೇ ಆದ ಪ್ರತಿಭೆ ಪ್ರದರ್ಶಿಸಿರುವ ಮಂಗಳೂರಿನ ಮಿಶ್ಕಾ ಚೇತನ್, ತುಳು ಮತ್ತು ಕನ್ನಡ ಚಿತ್ರರಂಗದಲ್ಲಿ ಭರವಸೆಯ ಬಾಲ ಕಲಾವಿದೆಯಾಗಿ ಗುರುತಿಸಿಕೊಂಡಿದ್ದಾರೆ. ಹಲವು ಪ್ರಶಸ್ತಿಗಳು ಹಾಗೂ ವಿವಿಧ ಕ್ಷೇತ್ರಗಳ ಸಾಧನೆಗಳ ಮೂಲಕ ಮಿಶ್ಕಾ ಚೇತನ್ ಗಮನ ಸೆಳೆದಿದ್ದಾರೆ.

ಚೇತನ್ ಕುಮಾರ್ ಮತ್ತು ತಶ್ಮ ದಂಪತಿಯ ಪುತ್ರಿಯಾಗಿರುವ ಮಿಶ್ಕಾ ಚೇತನ್ 2016ರ ಜನವರಿ 16ರಂದು ಮಂಗಳೂರಿನಲ್ಲಿ ಜನಿಸಿದ್ದು, ಪ್ರಸ್ತುತ ಜಪ್ಪು ಮಜಿಲದಲ್ಲಿ ನೆಲೆಸಿದ್ದಾರೆ. ಮಂಗಳೂರಿನ ಶಾರದಾ ವಿದ್ಯಾಲಯ, ಕೊಡೀಯಾಲ್‌ಬೈಲ್‌ನಲ್ಲಿ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಬಾಲ್ಯದಿಂದಲೇ ವೆಸ್ಟರ್ನ್ ಡ್ಯಾನ್ಸ್, ನಟನ ಹಾಗೂ ಫ್ಯಾಷನ್ ಮಾಡೆಲಿಂಗ್‌ನಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ಮಿಶ್ಕಾ ಚೇತನ್, ಮಂಗಳೂರಿನ ಶೋ ಸ್ಟಾಪರ್ಸ್ ಡ್ಯಾನ್ಸ್ ಸ್ಟುಡಿಯೋದಲ್ಲಿ ಸಂದೀಪ್ ಆಚಾರ್ಯ ಅವರಿಂದ ವೆಸ್ಟರ್ನ್ ಡ್ಯಾನ್ಸ್ ತರಬೇತಿ ಹಾಗೂ ದೀಪಕ್ ಗಂಗೂಲಿ ಅವರಿಂದ ಫ್ಯಾಷನ್ ಮಾಡೆಲಿಂಗ್ ತರಬೇತಿ ಪಡೆಯುತ್ತಿದ್ದಾರೆ.

ನೃತ್ಯ, ಫ್ಯಾಷನ್ ಶೋ, ಚಿತ್ರಕಲೆ, ಫ್ಯಾನ್ಸಿ ಡ್ರೆಸ್ ಸೇರಿದಂತೆ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದಿರುವ ಮಿಶ್ಕಾ ಚೇತನ್, ವೇದಿಕೆ ಅಭಿವ್ಯಕ್ತಿ ಮತ್ತು ಅಭಿನಯ ಕೌಶಲ್ಯದ ಮೂಲಕ ಬಾಲ್ಯದಲ್ಲೇ ಗುರುತಿಸಿಕೊಂಡಿದ್ದಾರೆ. ಅರವಿಂದ್ ಬೋಳಾರ್ ಅಭಿನಯದ ಸೂಪರ್ ಹಿಟ್ ತುಳು ಚಲನಚಿತ್ರ *"ಪುಳಿಮುಂಚಿ"*ಯಲ್ಲಿ ಅವರ ಪುತ್ರಿಯ ಪಾತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಮಿಶ್ಕಾ ಚೇತನ್, ಬಳಿಕ ಕನ್ನಡದ "ಲೈಟ್ ಹೌಸ್" ಚಲನಚಿತ್ರದಲ್ಲಿ ವಿದ್ಯಾರ್ಥಿನಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಸ್ತುತ "ಲೈಫ್ ಇಸ್ ಜಿಂಗಲಾಲಾ" ತುಳು ಚಲನಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದು, Baby Billion ಯೂಟ್ಯೂಬ್ ಚಾನೆಲ್ ಕಾರ್ಯಕ್ರಮಕ್ಕೂ ಆಯ್ಕೆಯಾಗಿದ್ದಾರೆ. ಜೊತೆಗೆ "ವೈಲ್ಡ್ ಟೈಗರ್ ಸಫಾರಿ" ಕನ್ನಡ ಚಲನಚಿತ್ರದಲ್ಲಿಯೂ ಅಭಿನಯಿಸುತ್ತಿದ್ದಾರೆ.

ಅಭಿನಯದ ಜೊತೆಗೆ ಶಿಕ್ಷಣದಲ್ಲಿಯೂ ಉತ್ತಮ ಸಾಧನೆ ಮಾಡುತ್ತಿರುವ ಮಿಶ್ಕಾ ಚೇತನ್, ಶಿಕ್ಷಕರು ಹಾಗೂ ಶಾಲೆಯ ಆಡಳಿತ ಮಂಡಳಿಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.

ಉದಯವಾಣಿ ಮಕ್ಕಳ ದಿನಾಚರಣೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ರೆನಾಲ್ಟ್ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, ಎಸ್.ಡಿ.ಎಂ. ಕಾಲೇಜಿನ ಭದ್ರವೇಷ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು ಆಯೋಜಿಸಿದ ಮುದ್ದುಕೃಷ್ಣ ಹಾಗೂ ಕುಕ್ಕಿಂಗ್ ವಿತೌಟ್ ಫೈರ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಶೋ ಸ್ಟಾಪರ್ಸ್ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಚಕ್ರಪಾಣಿ ದೇವಸ್ಥಾನ ಅತ್ತಾವರ ಆಯೋಜಿಸಿದ ಗಣೇಶ ಹಬ್ಬದ ಚಿತ್ರಕಲೆ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, ಶಾರದಾ ವಿದ್ಯಾಸಂಸ್ಥೆಯ "ವೆಸ್ಟ್ ಬೆಸ್ಟ್ ಆಫ್ ವೇಸ್ಟ್" ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಸೂರೆನ್ಸ್ ಕಲಾರತ್ನ ಅವಾರ್ಡ್, ಪ್ರಿನ್ಸೆಸ್ ಆಫ್ ಕರಾವಳಿ–2025 ರಾಜ್ಯ ಮಟ್ಟದ ರನ್ನರ್-ಅಪ್ ಪ್ರಶಸ್ತಿ, ಕಾರ್ಕಳ ಸಮ್ಮರ್ ಫೆಸ್ಟಿವಲ್ ಫ್ಯಾಷನ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಹಾಗೂ ಫೋರಂ ಫಿಜಾ ನೆಕ್ಸಸ್ ಮಾಲ್, ಮಂಗಳೂರು ಆಯೋಜಿಸಿದ ಮಿಲ್ಲೆಟ್ ಕ್ರಾಫ್ಟ್ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಸೇರಿದಂತೆ ಹಲವು ಗೌರವಗಳನ್ನು ಪಡೆದಿದ್ದಾರೆ.

ನಟನೆ, ನೃತ್ಯ, ಫ್ಯಾಷನ್ ಮಾಡೆಲಿಂಗ್ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ನಿರಂತರ ಸಾಧನೆ ಮಾಡುತ್ತಿರುವ ಮಿಶ್ಕಾ ಚೇತನ್, ಮುಂದಿನ ದಿನಗಳಲ್ಲಿ ಕನ್ನಡ ಮತ್ತು ತುಳು ಚಿತ್ರರಂಗದಲ್ಲಿ ಇನ್ನಷ್ಟು ಸಾಧನೆ ಮಾಡುವ ನಿರೀಕ್ಷೆ ಮೂಡಿಸಿದ್ದಾರೆ.