ಕಾರ್ಕಳ : ಪಂಚಮಿ ಪ್ರಕಾಶ್ ಅಜೆಕಾರು ಸಂಗೀತ, ಭರತನಾಟ್ಯ, ಯಕ್ಷನೃತ್ಯ, ಅಭಿನಯ ಗೀತೆ, ವೆಸ್ಟರ್ನ್ ಡ್ಯಾನ್ಸ್ ಹಾಗೂ ನಾಟಕ ಕ್ಷೇತ್ರಗಳಲ್ಲಿ ತನ್ನ ಪ್ರತಿಭೆಯನ್ನು ಅನಾವರಣಗೊಳಿಸಿ ರಾಜ್ಯದ ವಿವಿಧ ಭಾಗಗಳಲ್ಲಿ ಮೆಚ್ಚುಗೆ ಗಳಿಸಿರುವ ಬಾಲ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾಳೆ. ಪ್ರಸ್ತುತ ಬಲ್ಯೊಟ್ಟು ಹೊಸ್ಮಾರು ಗುರುಕೃಪಾ ಸೆಂಟ್ರಲ್ ಸ್ಕೂಲ್ನಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪಂಚಮಿ, ಕಲೆಯ ಜೊತೆಗೆ ಶಿಕ್ಷಣದಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದಾಳೆ.

ಪ್ರಕಾಶ್ ಅಜೆಕಾರು ಮತ್ತು ಧೃತಿ ಪ್ರಕಾಶ್ ದಂಪತಿಯ ಪುತ್ರಿಯಾಗಿರುವ ಪಂಚಮಿ, ಕೆರ್ವಾಷೆ ಶಾಲೆಯ ಶಿಕ್ಷಕಿ ಪ್ರತಿಭಾ ಆರ್. ಸುವರ್ಣ ಅವರ ಮೊಮ್ಮಗಳು. ಮೂರು ವರ್ಷದ ಪ್ರಾಯದಲ್ಲೇ ಕಲಾ ವೇದಿಕೆಗೆ ಕಾಲಿಟ್ಟಿದ್ದ ಪಂಚಮಿ, ಇದುವರೆಗೆ ಕಟೀಲು, ಕೊಲ್ಲೂರು, ಉಡುಪಿ, ಮಂಗಳೂರು, ಕಾರ್ಕಳ, ಮೂಡುಬಿದಿರೆ, ಉಜಿರೆ ಹಾಗೂ ಕೇರಳ ಸೇರಿದಂತೆ 60ಕ್ಕೂ ಹೆಚ್ಚು ವೇದಿಕೆಗಳಲ್ಲಿ ನೃತ್ಯ, ಗಾಯನ ಮತ್ತು ಅಭಿನಯದ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ವಿವಿಧ ಕಾರ್ಯಕ್ರಮಗಳಲ್ಲಿ ಪ್ರಶಂಸಾಪತ್ರ ಹಾಗೂ ಸ್ಮರಣಿಕೆಗಳನ್ನು ಸ್ವೀಕರಿಸಿದ್ದಾಳೆ.

ಪಂಚಮಿ ಸಂಗೀತವನ್ನು ಯಶವಂತ್ ಎಂ.ಜಿ. ಅವರ ಬಳಿ ಅಭ್ಯಾಸ ಮಾಡುತ್ತಿದ್ದು, ಭರತನಾಟ್ಯ ಹಾಗೂ ಯಕ್ಷಗಾನವನ್ನು ತಾಯಿ ಧೃತಿ ಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಕಲಿಯುತ್ತಿದ್ದಾಳೆ. ಆಕೆ ವಾಯ್ಸ್ ಆಫ್ ಆರಾಧನಾ ತಂಡದ ಸದಸ್ಯೆಯಾಗಿದ್ದಾಳೆ.

ಅಭಿಮತ ವಾಹಿನಿ ಹಾಗೂ ತುಳುನಾಡು ವಾರ್ತೆ ವಾಹಿನಿಗಳಲ್ಲಿ ಹಲವು ಬಾರಿ ಕಾರ್ಯಕ್ರಮ ನೀಡಿರುವ ಪಂಚಮಿ, ರೇಡಿಯೋ ಸಾರಂಗ್ 107.8 ಎಫ್‌ಎಂ ಪ್ರಸಾರ ಮಾಡುವ ಹೃದಯ ರಾಗ ಕಾರ್ಯಕ್ರಮದಲ್ಲಿ ಬಹುಮುಖ ಬಾಲ ಪ್ರತಿಭೆಯಾಗಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದಾಳೆ. ಅಭಿಮತ ವಾಹಿನಿಯ ಪ್ರತಿಭಾ ಚುಕ್ಕಿ ಕಾರ್ಯಕ್ರಮದಲ್ಲಿಯೂ ವಿಶೇಷ ಅತಿಥಿಯಾಗಿ ಕಾಣಿಸಿಕೊಂಡಿದ್ದಾಳೆ. ರೇಡಿಯೋ ಸಾರಂಗ್ನ ಮಕ್ಕಳಿಗಾಗಿ ಪ್ರಸಾರವಾಗುವ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದಾಳೆ.

ಚೇತನಾ ವಿಶೇಷ ಶಾಲೆಯ ವಿಶೇಷ ಮಕ್ಕಳ ಕಾರ್ಯಕ್ರಮದಲ್ಲಿ ಅತಿಥಿ ಕಲಾವಿದೆಯಾಗಿ ಭಾಗವಹಿಸಿ ಗೌರವ ಸನ್ಮಾನ ಸ್ವೀಕರಿಸಿರುವ ಪಂಚಮಿ, ರಾಜ್ಯಮಟ್ಟದ ಮಕ್ಕಳ ಹಬ್ಬ, ಮಕ್ಕಳ ಸಾಂಸ್ಕೃತಿಕ ಸಮ್ಮೇಳನ ಹಾಗೂ ಕವಿಗೋಷ್ಠಿಗಳಲ್ಲೂ ಭಾಗವಹಿಸಿ ಪ್ರಶಂಸಾಪತ್ರಗಳನ್ನು ಪಡೆದಿದ್ದಾಳೆ. ಮೂಡುಬಿದಿರೆಯ ಅಗರಿ ಎಂಟರ್‌ಪ್ರೈಸಸ್ ವತಿಯಿಂದ ಪಂಚಮಿಯ ಕಲಾ ಪ್ರತಿಭೆಯನ್ನು ಗುರುತಿಸಿ ಗೌರವಿಸಲಾಗಿದೆ. ಹಾಗೆಯೇ ಲಯನ್ಸ್ ಇಂಟರ್‌ನ್ಯಾಷನಲ್ ಲಯನ್ಸ್ ಕ್ಲಬ್ ಸೆಂಟ್ರಲ್ ಕಾರ್ಕಳ ವತಿಯಿಂದ ಸನ್ಮಾನ, ಆಕ್ಸಿಸ್ ಮ್ಯಾಕ್ಸ್ ವತಿಯಿಂದ ಕಲಾರತ್ನ ಪುರಸ್ಕಾರ ಹಾಗೂ ಕಲಾವಿದರ ರಕ್ಷಣಾ ವೇದಿಕೆ, ಬೆಂಗಳೂರು ವತಿಯಿಂದ ಸುವರ್ಣ ಕರ್ನಾಟಕ ಬಾಲ ಕಲಾ ಪುರಸ್ಕಾರ ಲಭಿಸಿದೆ.