ಮೂಡುಬಿದಿರೆ: ಮಹಿಳಾ ಸಬಲೀಕರಣವೆಂದರೆ ಕೇವಲ ಮೀಸಲಾತಿ ಅಥವಾ ಅವಕಾಶಗಳನ್ನು ಪಡೆಯುವುದಲ್ಲ; ತನ್ನ ಸಾಮರ್ಥ್ಯ, ಅರ್ಹತೆ ಹಾಗೂ ಆತ್ಮವಿಶ್ವಾಸದ ಮೂಲಕ ಸಮಾಜದಲ್ಲಿ ತನ್ನದೇ ಆದ ಸ್ಥಾನವನ್ನು ನಿರ್ಮಿಸಿಕೊಳ್ಳುವುದಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ವಿಶ್ರಾಂತ ಸದಸ್ಯೆ ಶ್ಯಾಮಲಾ ಎಸ್. ಕುಂದರ್ ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಹಿಳಾ ಸಂಘಟನೆ ‘ಸಕ್ಷಮಾ’ ವತಿಯಿಂದ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಮಹಿಳಾ ಸಬಲೀಕರಣ’ ವಿಷಯದ ಕುರಿತು ಮಾತನಾಡಿದ ಅವರು, ಮಹಿಳೆಯರು ತಮ್ಮ ಹಕ್ಕುಗಳು, ಕರ್ತವ್ಯಗಳು ಹಾಗೂ ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಜಾಗೃತರಾಗಬೇಕು ಎಂದರು.

ಮಹಿಳೆಯರಲ್ಲಿ ಅಪಾರವಾದ ಅರ್ಹತೆ ಮತ್ತು ಸಾಮರ್ಥ್ಯವಿದೆ. ಯಾವುದೇ ಅನುಕಂಪದ ಆಧಾರದ ಮೇಲೆ ಅವಕಾಶವನ್ನು ಬೇಡುವ ಅಗತ್ಯವಿಲ್ಲ. ತಮ್ಮ ಅರ್ಹತೆ, ಪರಿಶ್ರಮ ಮತ್ತು ಸಾಮರ್ಥ್ಯವನ್ನು ಗುರುತಿಸಿ ಅವಕಾಶ ನೀಡಿ ಎಂದು ಕೇಳುವ ಆತ್ಮವಿಶ್ವಾಸ ಮಹಿಳೆಯರಲ್ಲಿ ಬರಬೇಕು ಎಂದು ಹೇಳಿದರು.

ಆಸ್ತಿ ಸೇರಿದಂತೆ ಕಾನೂನುಬದ್ಧವಾಗಿ ದೊರೆಯುವ ಹಕ್ಕುಗಳ ಬಗ್ಗೆ ಮಹಿಳೆಯರಿಗೆ ಅರಿವು ಮೂಡಬೇಕು. ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳುವುದರ ಜೊತೆಗೆ ಇತರರ ಹಕ್ಕುಗಳನ್ನೂ ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಸಮಾಜದಲ್ಲಿ ಕಣ್ಣೆದುರು ಯಾವುದೇ ರೀತಿಯ ಅನ್ಯಾಯ ಅಥವಾ ತಪ್ಪು ನಡೆಯುತ್ತಿದ್ದರೆ ಅದನ್ನು ಪ್ರಶ್ನಿಸುವ ಧೈರ್ಯ ಬೆಳೆಸಿಕೊಳ್ಳಬೇಕು. ಬದಲಾವಣೆ ಮತ್ತೊಬ್ಬರಿಂದ ಬರಲಿ ಎಂದು ಕಾಯುವುದಕ್ಕಿಂತ ಮೊದಲು ನಮ್ಮಲ್ಲೇ ಬದಲಾವಣೆ ಆರಂಭವಾಗಬೇಕು.

ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ನಮ್ಮ ಮುಂದೆ ಗುರಿ ಇರಬೇಕು; ಹಿಂದೆ ಗುರುವಿನ ಮಾರ್ಗದರ್ಶನ ಮತ್ತು ಸಹಕಾರ ಇರಬೇಕು ಎಂದು ಅಭಿಪ್ರಾಯಪಟ್ಟರು.

ಪ್ರಕೃತಿ ಮತ್ತು ಸಮಾಜದ ನಡುವೆ ಸಾಮರಸ್ಯ ಅತ್ಯಗತ್ಯ. ಪ್ರಕೃತಿಯೊಂದಿಗೆ ಹೊಂದಿಕೊಂಡು ಬದುಕಿದಾಗ ಅದು ಸಂಸ್ಕೃತಿ; ಪ್ರಕೃತಿಗೆ ವಿರುದ್ಧವಾಗಿ ನಡೆದಾಗ ಅದು ವಿಕೃತಿ ಎಂಬುದನ್ನು ಅರಿತುಕೊಳ್ಳಬೇಕು. ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಜವಾಬ್ದಾರಿ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದರು.

ದೇಶದ ಬಗ್ಗೆ ಗೌರವ, ಸಂವಿಧಾನದ ಬಗ್ಗೆ ಅರಿವು ಹಾಗೂ ಸಾಮಾಜಿಕ ಹೊಣೆಗಾರಿಕೆ ಪ್ರತಿಯೊಬ್ಬ ನಾಗರಿಕನಲ್ಲೂ ಇರಬೇಕು. ಹಿಂದಿನ ತಲೆಮಾರುಗಳಲ್ಲಿ ಕುಟುಂಬ ಮತ್ತು ಸಮಾಜವನ್ನು ಬೆಸೆಯುತ್ತಿದ್ದ ಭಜನೆ, ಸಾಂಸ್ಕೃತಿಕ ಚಟುವಟಿಕೆಗಳಂತಹ ಮೌಲ್ಯಾಧಾರಿತ ಚಟುವಟಿಕೆಗಳ ಸ್ಥಾನವನ್ನು ಇಂದು ವೈವಿಧ್ಯಮಯ ದೂರದರ್ಶನ ಕಾರ್ಯಕ್ರಮಗಳು ಹಾಗೂ ಡಿಜಿಟಲ್ ಮನರಂಜನೆಗಳು ಆಕ್ರಮಿಸಿವೆ. ತಂತ್ರಜ್ಞಾನವನ್ನು ತಿರಸ್ಕರಿಸುವ ಬದಲು ಅದನ್ನು ಸದುಪಯೋಗಪಡಿಸಿಕೊಂಡು ಮೌಲ್ಯಗಳನ್ನು ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದು ತಾಂತ್ರಿಕ ಯುಗವಾಗಿದ್ದು, ಮಹಿಳೆಯರು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಶಿಕ್ಷಣ, ಉದ್ಯೋಗ, ಉದ್ಯಮ, ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳಬೇಕು. ತಂತ್ರಜ್ಞಾನವು ಮಹಿಳೆಯರ ಜ್ಞಾನ ಮತ್ತು ಅವಕಾಶಗಳ ವ್ಯಾಪ್ತಿಯನ್ನು ಹೆಚ್ಚಿಸುವ ಸಾಧನವಾಗಬೇಕು ಎಂದರು. ರಾಜಕೀಯ ಕ್ಷೇತ್ರದಲ್ಲಿಯೂ ಮಹಿಳೆಯರ ಸಮಾನ ಭಾಗವಹಿಸುವಿಕೆ ಅಗತ್ಯವಿದೆ. ಮಹಿಳೆಯರಿಗೆ 33 ಶೇಕಡಾ ರಾಜಕೀಯ ಮೀಸಲಾತಿ ನೀಡುವ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಯತ್ನಗಳು ಮಹಿಳೆಯರ ರಾಜಕೀಯ ಪಾಲ್ಗೊಳ್ಳುವಿಕೆಯನ್ನು ಮತ್ತಷ್ಟು ಹೆಚ್ಚಿಸುವ ಆಶಾವಾದ ಮೂಡಿಸಿವೆ ಎಂದು ಹೇಳಿದರು.

ಹೆಣ್ಣುಮಕ್ಕಳ ಸಶಕ್ತೀಕರಣ ದೇಶದಲ್ಲಿ ನಿರಂತರವಾಗಿ ನಡೆಯುತ್ತಿದೆ. ಶಿಕ್ಷಣ, ಉದ್ಯೋಗ, ಆಡಳಿತ, ರಾಜಕೀಯ ಹಾಗೂ ವಿವಿಧ ವೃತ್ತಿಪರ ಕ್ಷೇತ್ರಗಳಲ್ಲಿ ಮಹಿಳೆಯರು ಮುನ್ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ಆದರೆ ಈ ಪ್ರಗತಿ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗದೆ ಗ್ರಾಮೀಣ ಭಾಗದ ಮಹಿಳೆಯರಿಗೂ ತಲುಪಬೇಕು ಎಂದರು.,

ಮಹಿಳಾ ಸಬಲೀಕರಣವು ಮಹಿಳೆಯರ ಬದುಕನ್ನು ಮಾತ್ರ ಬದಲಿಸುವ ಪ್ರಕ್ರಿಯೆಯಲ್ಲ; ಅದು ಕುಟುಂಬ, ಸಮಾಜ ಮತ್ತು ದೇಶದ ಪ್ರಗತಿಗೆ ದಾರಿ ಮಾಡಿಕೊಡುವ ಶಕ್ತಿಯಾಗಿದೆ. ಆದ್ದರಿಂದ ಮಹಿಳೆಯರು ಆತ್ಮವಿಶ್ವಾಸದಿಂದ ಮುಂದೆ ಬಂದು ತಮ್ಮ ಹಕ್ಕು, ಅರ್ಹತೆ ಮತ್ತು ಸಾಮರ್ಥ್ಯವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ಅನುಕಂಪದ ನೆಲೆಯಲ್ಲಿ ಯಾವುದೇ ಭಿಕ್ಷೆ ಬೇಡ; ನಮ್ಮ ಅರ್ಹತೆ ಮತ್ತು ಸಾಮರ್ಥ್ಯಕ್ಕೆ ತಕ್ಕ ಅವಕಾಶವನ್ನು ಕೇಳೋಣ ಎಂಬ ಸಂದೇಶದೊಂದಿಗೆ ಮಹಿಳೆಯರಲ್ಲಿ ಆತ್ಮವಿಶ್ವಾಸ ಮತ್ತು ಸ್ವಾವಲಂಬನೆಯ ಅಗತ್ಯವನ್ನು ಒತ್ತಿ ಹೇಳಿದರು.

ಆಳ್ವ ಫಾರ್ಮಸಿಯ ಆಡಳಿತಾಧಿಕಾರಿ ಹಾಗೂ ಸಕ್ಷಮ ವೇದಿಕೆಯ ಸಂಚಾಲಕಿ ಡಾ. ಗ್ರೀಷ್ಮಾ ವಿವೇಕ ಆಳ್ವ, ಕಾರ್ಯಕ್ರಮ ಸಂಯೋಜಕಿ ಡಾ. ಅರ್ಚನಾ ಪ್ರಭಾತ್ ಹಾಗೂ ಸಂಘಟನೆಯ ಸದಸ್ಯರು ಇದ್ದರು.