ಮೂಡುಬಿದಿರೆ: ಮಾದರಿ ಸೋಲಾರ್‌ ಗ್ರಾಮ ಯೋಜನೆಗೆ ಆಯ್ಕೆಯಾಗಿರುವ ಪುತ್ತಿಗೆ ಗ್ರಾಮ ಪಂಚಾಯಿತಿಗೆ ಲಭಿಸಿರುವ ಸುಮಾರು ₹1 ಕೋಟಿ ಅನುದಾನವನ್ನು ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಸಮರ್ಪಕವಾಗಿ ಬಳಸುವ ಕುರಿತು ಶುಕ್ರವಾರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ರಾಜ್ಯದ ಆಯ್ದ ಏಳು–ಎಂಟು ಗ್ರಾಮಗಳಲ್ಲಿ ಪುತ್ತಿಗೆ ಗ್ರಾಮವೂ ಆಯ್ಕೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಯ್ಕೆಯಾದ ಏಕೈಕ ಗ್ರಾಮವಾಗಿದೆ. ಡಿಸ್ಟ್ರಿಬ್ಯೂಟೆಡ್‌ ರಿನ್ಯೂವೆಬಲ್‌ ಎನರ್ಜಿ (ಡಿಆರ್‌ಇ) ಯೋಜನೆಯಡಿ ಕೇವಲ ಮನೆಗಳ ಮೇಲ್ಛಾವಣಿಯಲ್ಲಿ ಸೋಲಾರ್‌ ಪ್ಯಾನೆಲ್‌ ಅಳವಡಿಸಿ ವಿದ್ಯುತ್‌ ಉತ್ಪಾದಿಸುವುದಕ್ಕೆ ಸೀಮಿತವಾಗದೆ, ಗ್ರಾಮದ ವಿವಿಧ ಮೂಲಸೌಕರ್ಯ ಮತ್ತು ಸೌಲಭ್ಯಗಳ ಅಗತ್ಯಗಳನ್ನು ಗುರುತಿಸಿ ಯೋಜನೆ ರೂಪಿಸುವ ಉದ್ದೇಶ ಹೊಂದಲಾಗಿದೆ.

ಪಂಚಾಯಿತಿ ವ್ಯಾಪ್ತಿಯಲ್ಲಿ ಸೌರ ವಿದ್ಯುತ್‌ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಪಂಚಾಯಿತಿಗೆ ನಿರಂತರ ಆದಾಯದ ಮೂಲ ಸೃಷ್ಟಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ನಿಟ್ಟಿನಲ್ಲಿ ಕೇಮಾರು ಹಾಗೂ ಮಜ್ಜಿಗುರಿ ರುದ್ರಭೂಮಿಗೆ ಸೇರಿದ ಸುಮಾರು ಎರಡು ಎಕರೆ ಜಾಗದಲ್ಲಿ ಸೋಲಾರ್‌ ಗ್ರಿಡ್‌ ಅಳವಡಿಸಿ ವಿದ್ಯುತ್‌ ಉತ್ಪಾದಿಸುವ ಪ್ರಸ್ತಾವನೆ ಮುಂದಿಡಲಾಯಿತು. ಉತ್ಪಾದನೆಯಾದ ವಿದ್ಯುತ್‌ನ್ನು ಮೆಸ್ಕಾಂಗೆ ಪೂರೈಸಿ, ಅದರಿಂದ ದೊರೆಯುವ ಆದಾಯದ ಹೆಚ್ಚುವರಿ ಮೊತ್ತವನ್ನು ಗ್ರಾಮ ಪಂಚಾಯಿತಿಯ ವಿವಿಧ ಅಭಿವೃದ್ಧಿ ಚಟುವಟಿಕೆಗಳಿಗೆ ಬಳಸುವ ಉದ್ದೇಶ ಹೊಂದಲಾಗಿದೆ.

ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಾಗೂ ಸಾರ್ವಜನಿಕ ಕಟ್ಟಡಗಳು ಸೇರಿದಂತೆ ವಿವಿಧ ಕಟ್ಟಡಗಳಿಗೆ ಯೋಜನೆಯಡಿ ಸೋಲಾರ್‌ ವ್ಯವಸ್ಥೆ ಅಳವಡಿಸುವ ಕುರಿತು ಚಿಂತನೆ ನಡೆಸಲಾಗಿದೆ. ಅಂತಹ ವ್ಯವಸ್ಥೆಗಳಿಂದ ದೊರೆಯುವ ಆದಾಯವು ಗ್ರಾಮ ಪಂಚಾಯಿತಿಗೆ ಲಭಿಸುವಂತೆ ಕ್ರಮ ಕೈಗೊಳ್ಳುವ ಬಗ್ಗೆಯೂ ಚರ್ಚೆ ನಡೆಯಿತು. ಇದರಿಂದ ಪಂಚಾಯಿತಿಯ ಸ್ವಂತ ಆದಾಯದ ಮೂಲ ಬಲಪಡಿಸುವುದರ ಜತೆಗೆ ವಿದ್ಯುತ್‌ ವೆಚ್ಚದಲ್ಲೂ ಉಳಿತಾಯವಾಗಲಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೀಮ ನಾಯಕ್ ಬಿ. ತಿಳಿಸಿದರು.

ಸೋಲಾರ್‌ ಯೋಜನೆಯಿಂದ ಲಭಿಸುವ ಆದಾಯವನ್ನು ಪಂಚಾಯಿತಿ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸುವ ಉದ್ದೇಶವಿದೆ. ಯೋಜನೆಯ ಅನುಷ್ಠಾನದಲ್ಲಿ ಸ್ಥಳೀಯ ಅಗತ್ಯಗಳಿಗೆ ಆದ್ಯತೆ ನೀಡಿ, ಪಂಚಾಯಿತಿಯ ಆರ್ಥಿಕ ಸ್ವಾವಲಂಬನೆಗೆ ಪೂರಕವಾಗುವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಊರ್ಜಾ ಡೆವಲಪ್‌ಮೆಂಟ್‌ ಸೊಲ್ಯೂಷನ್‌ ಇಂಡಿಯಾ ಪ್ರೈ.ಲಿ.ಯ ಪ್ರಾದೇಶಿಕ ವ್ಯವಸ್ಥಾಪಕ ವರುಣ್ ಜಿ.ಎಂ. ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ರೈತರು, ಮಹಿಳಾ ಸ್ವಸಹಾಯ ಸಂಘಗಳು ಸೇರಿದಂತೆ ವಿವಿಧ ವರ್ಗಗಳ ಅಗತ್ಯಗಳನ್ನು ಗುರುತಿಸಿ ಆದ್ಯತೆಯ ಪಟ್ಟಿ ಸಿದ್ಧಪಡಿಸಲಾಗುವುದು. ಅದರ ಆಧಾರದ ಮೇಲೆ ಲಭ್ಯವಿರುವ ಅನುದಾನದಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಪುತ್ತಿಗೆ ಗ್ರಾಮದಲ್ಲಿ ಬೀದಿ ದೀಪಗಳು ಹಾಗೂ ಕುಡಿಯುವ ನೀರಿನ ಪಂಪ್‌ಗಳಿಗೆ ಸೋಲಾರ್‌ ವಿದ್ಯುತ್‌ ಬಳಸುವುದರಿಂದ ಮೆಸ್ಕಾಂಗೆ ಪಾವತಿಸುವ ವಿದ್ಯುತ್‌ ಬಿಲ್‌ ವೆಚ್ಚದಲ್ಲಿ ಉಳಿತಾಯವಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಯಿತು. ಉಳಿತಾಯವಾಗುವ ಹಣವನ್ನು ಗ್ರಾಮಾಭಿವೃದ್ಧಿ ಕಾಮಗಾರಿಗಳಿಗೆ ಬಳಸುವ ಸಾಧ್ಯತೆಯ ಕುರಿತು ಚರ್ಚಿಸಲಾಯಿತು.

ಗ್ರಾಮ ಪಂಚಾಯಿತಿಗೆ ಸೇರಿದ ಜಾಗದ ಜತೆಗೆ ಕಂದಾಯ ಇಲಾಖೆಗೆ ಸೇರಿದ ಸರ್ಕಾರಿ ಜಾಗದಲ್ಲಿಯೂ ಯೋಜನೆ ಅನುಷ್ಠಾನಗೊಳಿಸುವ ಸಾಧ್ಯತೆ ಕುರಿತು ಚರ್ಚೆ ನಡೆಯಿತು. ಅಲ್ಲಿ ಉತ್ಪಾದನೆಯಾಗುವ ವಿದ್ಯುತ್‌ನ್ನು ಗ್ರಿಡ್‌ಗೆ ನೀಡುವ ವ್ಯವಸ್ಥೆಯ ಬಗ್ಗೆಯೂ ಮಾಹಿತಿ ವಿನಿಮಯ ನಡೆಯಿತು.

ಮಳೆಗಾಲದಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾದಾಗ ಕುಡಿಯುವ ನೀರಿನ ಪಂಪ್‌ಗಳು ಕಾರ್ಯನಿರ್ವಹಿಸದೆ ಹಲವು ಕಾಲನಿಗಳಿಗೆ ನೀರಿನ ಸಮಸ್ಯೆ ಎದುರಾಗುವ ವಿಚಾರವೂ ಸಭೆಯಲ್ಲಿ ಪ್ರಸ್ತಾಪವಾಯಿತು. ಐದಾರು ಮನೆಗಳಿಂದ 80 ಮನೆಗಳವರೆಗೆ ಇರುವ ಪ್ರದೇಶಗಳು ಪಂಚಾಯಿತಿಯ ಬೋರ್‌ವೆಲ್‌ ಮತ್ತು ನೀರು ಪೂರೈಕೆ ವ್ಯವಸ್ಥೆಯನ್ನು ಅವಲಂಬಿಸಿರುವುದರಿಂದ ವಿದ್ಯುತ್‌ ವ್ಯತ್ಯಯದ ಸಂದರ್ಭದಲ್ಲಿ ತೊಂದರೆ ಉಂಟಾಗುತ್ತದೆ ಎಂದು ತಿಳಿಸಲಾಯಿತು.

ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಜಿ ಜನಪ್ರತಿನಿಧಿಗಳು, ಸ್ವಸಹಾಯ ಗುಂಪುಗಳ ಸದಸ್ಯರು, ರೈತರು, ಅಧಿಕಾರಿಗಳು ಹಾಗೂ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು. ಯೋಜನೆಯಡಿ ಕೈಗೊಳ್ಳಬೇಕಾದ ಕಾಮಗಾರಿಗಳು, ಸ್ಥಳದ ಆಯ್ಕೆ, ವಿದ್ಯುತ್‌ ಉತ್ಪಾದನೆ ಹಾಗೂ ಆದಾಯದ ಬಳಕೆ ಕುರಿತು ಮುಂದಿನ ಹಂತದಲ್ಲಿ ಸಮಗ್ರ ರೂಪುರೇಷೆ ಸಿದ್ಧಪಡಿಸಲು ನಿರ್ಧರಿಸಲಾಯಿತು.

ಯೋಜನೆಯಡಿ ಬರೀ ವಿದ್ಯುತ್‌ ಉತ್ಪಾದನೆಗೆ ಒತ್ತು ನೀಡದೆ, ಕುಡಿಯುವ ನೀರು ಸೇರಿದಂತೆ ಗ್ರಾಮದ ಮೂಲಭೂತ ಅಗತ್ಯಗಳನ್ನು ಗುರುತಿಸಿ, ಲಭ್ಯವಿರುವ ಅನುದಾನವನ್ನು ಅಗತ್ಯ ಕ್ಷೇತ್ರಗಳಿಗೆ ಬಳಸುವ ನಿಟ್ಟಿನಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಊರ್ಜಾ ಡೆವಲಪ್‌ಮೆಂಟ್‌ ಸೊಲ್ಯೂಷನ್‌ ಪ್ರತಿನಿಧಿ ಚಂದನ, ಪಂಚಾಯಿತಿ ಮಾಜಿ ಅಧ್ಯಕ್ಷೆ ರಾಧಾ, ಸದಸ್ಯರಾದ ಮುರಳಿಧರ ಕೋಟ್ಯಾನ್, ವಾಸುದೇವ ನಾಯಕ್ ಹಾಗೂ ಇತರ ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡರು.