ಮೂಡುಬಿದಿರೆ: ವಿಶ್ವ ಛಾಯಾಗ್ರಹಣ ದಿನಾಚರಣೆಯ ಅಂಗವಾಗಿ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆ ಮೂಡುಬಿದಿರೆ ವಲಯದ ವತಿಯಿಂದ ‘ಬಾಂಧವ್ಯ 2026 - ಛಾಯಾ ಕುಟುಂಬದ ಸಂಭ್ರಮ’ ಕಾರ್ಯಕ್ರಮ ಬುಧವಾರ ಸಂಜೆ ಮೂಡುಬಿದಿರೆಯ ಕಲ್ಪವೃಕ್ಷ ಸಭಾ ಭವನದಲ್ಲಿ ನಡೆಯಿತು.

ದೈಜಿವರ್ಲ್ಡ್ ಸಂಸ್ಥೆಯ ಮುಖ್ಯಸ್ಥ ವಾಲ್ಟರ್ ನಂದಳಿಕೆ ಕಾರ್ಯಕ್ರಮ ಉದ್ಘಾಟಿಸಿ, ಛಾಯಾಗ್ರಹಣ ಕೇವಲ ಚಿತ್ರ ಸೆರೆಹಿಡಿಯುವ ಕಲೆಯಲ್ಲ, ಸಮಾಜಕ್ಕೆ ನೈಜ ಸಂದೇಶ ಸಾರುವ ಮಹತ್ತರ ಜವಾಬ್ದಾರಿ ಎಂದರು. ಈ ವೃತ್ತಿಯಲ್ಲಿ ಮಾನವೀಯ ಮೌಲ್ಯ ಹಾಗೂ ಸ್ವಂತ ಆರೋಗ್ಯ ರಕ್ಷಣೆಗೆ ಪ್ರಥಮ ಆದ್ಯತೆ ನೀಡಬೇಕು. ನೆರವಾಗುವ ಮಾನವೀಯ ಸ್ಪಂದನೆಯೂ ನಮ್ಮಲ್ಲಿರಬೇಕು ಎಂದು ಹೇಳಿದರು.

ಇಂದು ಅಪಘಾತಗಳಾದಾಗ ಸಹಾಯ ಮಾಡುವುದಕ್ಕಿಂತ ಮೊಬೈಲ್‌ನಲ್ಲಿ ಫೋಟೋ ತೆಗೆದು ವೈರಲ್ ಮಾಡುವುದೇ ಹೆಚ್ಚಾಗಿದೆ. ಆದರೆ ಛಾಯಾಗ್ರಾಹಕರು ಸಮಾಜಕ್ಕೆ ಹಾನಿಯಾಗದಂತೆ, ಮಾನವೀಯತೆಯ ಸಂದೇಶ ನೀಡುವ ಜವಾಬ್ದಾರಿ ಹೊರಬೇಕು ಎಂದು ವಾಲ್ಟರ್ ನಂದಳಿಕೆ ಹೇಳಿದರು. ಛಾಯಾಗ್ರಾಹಕರ ಕಾರ್ಯಕ್ರಮಕ್ಕೆ ಕುಟುಂಬದವರನ್ನೂ ಒಳಗೊಳಿಸಿರುವುದು ವಿಶೇಷವಾಗಿದ್ದು, ಛಾಯಾಗ್ರಹಣದ ಮುಖ್ಯ ಆಕರ್ಷಣೆ ಚಿತ್ರವೇ ಆಗಿದೆ ಎಂದರು.

ವಲಯದ ಸದಸ್ಯರು ಹಾಗೂ ಅವರ ಕುಟುಂಬದ ಸದಸ್ಯರಿಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಛಾಯಾಗ್ರಾಹಕರ ಕುಟುಂಬಗಳ ನಡುವೆ ಸೌಹಾರ್ದತೆ ಮತ್ತು ಆತ್ಮೀಯತೆ ಬೆಳೆಸುವುದರ ಜೊತೆಗೆ ಒಕ್ಕೂಟವನ್ನು ಬಲಪಡಿಸುವ ಉದ್ದೇಶದಿಂದ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು. ಛಾಯಾಗ್ರಾಹಕ ಸದಸ್ಯರು ಹಾಗೂ ಕುಟುಂಬಸ್ಥರು ಪರಸ್ಪರ ಆತ್ಮೀಯವಾಗಿ ಬೆರೆತರು. ವಲಯ ಅಧ್ಯಕ್ಷ ನಿತಿನ್ ಬೆಳುವಾಯಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಜಯ್ ಮಂಗಳೂರು, ದೇವರಾಜ್ ಶೆಟ್ಟಿ, ರವಿ ಕೋಟ್ಯಾನ್, ವಿಲ್ಫ್ರೆಡ್ ಮೆಂಡೋನ್ಸಾ, ಉದಯಕುಮಾರ್ ಎಂ, ಪದ್ಮನಾಭ ಮಿಜಾರು, ನಮಿತ್ ಬಂಗೇರ ಹಾಗೂ ರಂಜಿತ್ ಕೋಟ್ಯಾನ್ ಭಾಗವಹಿಸಿದ್ದರು.

ಸಂದೀಪ್ ಶೆಟ್ಟಿ ರಾಯಿ ಕಾರ್ಯಕ್ರಮ ನಿರೂಪಿಸಿದರು. ವಿಲ್‌ಫ್ರೆಡ್ ಮೆಂಡೋನ್ಸ ಸ್ವಾಗತಿಸಿದರು. ನವೀನ್ ಬಂಗೇರ ವಂದಿಸಿದರು. ಕಾರ್ಯಕ್ರಮದಲ್ಲಿ ಸಮ್ಮಾನ, ವಿದ್ಯಾರ್ಥಿ ವೇತನ ಹಾಗೂ ಚಿಕಿತ್ಸೆಗೆ ನೆರವು ನೀಡುವ ಚಟುವಟಿಕೆಗಳು ನಡೆದವು.