ಮೂಡುಬಿದಿರೆ: ರಂಗಭೂಷಣ ಮಣಿ ಕೋಟೆಬಾಗಿಲು ಸಾರಥ್ಯದ ಪಿಂಗಾರ ಕಲಾವಿದೆರ್ ಬೆದ್ರ ಅಭಿನಯಿಸುವ ಈ ವರ್ಷದ ನೂತನ ತುಳು ನಾಟಕ ‘ಪ್ರಶ್ನಾರ್ಥಕ’ದ ಶೀರ್ಷಿಕೆ ಬಿಡುಗಡೆ ಸಮಾರಂಭ ಬುಧವಾರ ಸಂಜೆ ಕೋಟೆಬಾಗಿಲು ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ನಾಟಕ ರಚನೆಗಾರ ಮಣಿ ಕೋಟೆಬಾಗಿಲು, ಊರಿನ ಜನರ ಪ್ರೋತ್ಸಾಹ ಹಾಗೂ ಕಲಾಭಿಮಾನಿಗಳ ಸಹಕಾರದಿಂದ ರಂಗಭೂಮಿಯಲ್ಲಿ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ ಎಂದು ಹೇಳಿದರು. ತಮ್ಮ ಹತ್ತನೇ ನಾಟಕಕ್ಕೆ ಅನೇಕ ಮಂದಿ ಶೀರ್ಷಿಕೆಗಳನ್ನು ಕಳುಹಿಸಿದ್ದು, ಅವುಗಳಲ್ಲಿ ‘ಪ್ರಶ್ನಾರ್ಥಕ’ ಶೀರ್ಷಿಕೆಯನ್ನು ಆಯ್ಕೆ ಮಾಡಲಾಗಿದೆ ಎಂದರು. ತಾವು ರಚಿಸಿದ ‘ಕದಂಬ’ ನಾಟಕ 152 ಪ್ರದರ್ಶನಗಳನ್ನು ದಾಖಲಿಸಿದ್ದು, ಅದೇ ರೀತಿಯ ಪ್ರೋತ್ಸಾಹವನ್ನು ‘ಪ್ರಶ್ನಾರ್ಥಕ’ ನಾಟಕಕ್ಕೂ ಕಲಾಭಿಮಾನಿಗಳು ನೀಡಬೇಕು ಎಂದು ಮಣಿ ಕೋಟೆಬಾಗಿಲು ವಿನಂತಿಸಿದರು.
ಪಿಂಗಾರ ಕಲಾವಿದೆರ್ ತಂಡಕ್ಕೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದ ಕಲಾವಿದರು ಹಾಗೂ ಕಲಾಭಿಮಾನಿಗಳನ್ನು ಗೌರವಿಸಲಾಯಿತು. ಮಹಮ್ಮಾಯಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಹರೀಶ್ಚಂದ್ರ ಹೆಗ್ಡೆ ನಾಟಕದ ಶೀರ್ಷಿಕೆ ಬಿಡುಗಡೆಗೊಳಿಸಿದರು.
ನಾರಂಪಾಡಿಗುತ್ತು ಸುಧೀರ್ ಹೆಗ್ಡೆ, ಚಲನಚಿತ್ರ ನಟ ಸುರೇಶ್ ಅಂಚನ್, ಶಿಕ್ಷಕ ರುಡಾಲ್ಫ್ ಲೋಬೊ, ಬೆದ್ರ ತುಳುಕೂಟದ ಕಾರ್ಯದರ್ಶಿ ಚೇತನಾ ಆರ್. ಹೆಗ್ಡೆ, ಪುರಸಭೆ ಮಾಜಿ ಸದಸ್ಯ ರಾಜೇಶ್ ಕೋಟೆಗಾರ್, ಕಲಾಪೋಷಕ ವಸಂತ ಗುಣನೀಲ ಉಪಸ್ಥಿತರಿದ್ದರು. ಪ್ರವೀಣ್ ನೆಲ್ಲಿಕಟ್ಟೆ ನಿರೂಪಿಸಿದರು.