ಮೂಡುಬಿದಿರೆ: ಸುವರ್ಣ ಕರ್ನಾಟಕ ರಾಜ್ಯ ಸಮಿತಿ, ಜೈ ಭೀಮ್ ಯುವ ಸೇನೆಯ ರಾಜ್ಯ ಹಾಗೂ ಮೂಡುಬಿದಿರೆ ತಾಲೂಕು ಘಟಕದ ಆಶ್ರಯದಲ್ಲಿ ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಭಾನುವಾರ ಸಮಾಜ ಮಂದಿರದಲ್ಲಿ ಆಚರಿಸಲಾಯಿತು.

ಬಿಜೆಪಿ ಮುಖಂಡ ಕೆ. ಪಿ. ಜಗದೀಶ ಅಧಿಕಾರಿ ದೀಪ ಬೆಳಗಿಸಿ, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಬಳಿಕ ಮಾತನಾಡಿ, ಪ್ರಪಂಚಕ್ಕೆ ಅದ್ಭುತ ಕೊಡುಗೆ ನೀಡಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಿಚಾರಧಾರೆಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿವೆ. ನಾವು ಇಂದು ಸಂವಿಧಾನ, ಕಾನೂನು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ನೀಡುತ್ತಿದ್ದರೆ ಅದಕ್ಕೆ ಅಂಬೇಡ್ಕರ್ ಅವರೇ ಮೂಲ ಕಾರಣ ಎಂದರು. ಅಂಬೇಡ್ಕರ್ ಅಂತಹ ಮಹನೀಯರು ಕಟ್ಟಿದ ಭಾರತದಲ್ಲಿ 140 ಕೋಟಿ ಜನರು ಸುಖ, ಶಾಂತಿ ಹಾಗೂ ಪ್ರೀತಿಯಿಂದ ಬಾಳಬೇಕು. ಎಲ್ಲರೂ ಆರ್ಥಿಕವಾಗಿ ಸಬಲರಾಗಬೇಕು. ಜಾತಿ-ಧರ್ಮಕ್ಕಿಂತ ಹೆಚ್ಚಾಗಿ ನಾವೆಲ್ಲರೂ ಭಾರತೀಯರು ಎಂಬ ಭಾವನೆ ಮೂಡಬೇಕು ಎಂದು ಆಶಿಸಿದ ಅವರು, ಜೈ ಭೀಮ್ ಸಂಘಟನೆಯ ಕಾರ್ಯವೈಖರಿಯನ್ನು ಮೆಚ್ಚಿಕೊಂಡರು.

ಸಂಘಟನೆಯ ರಾಜ್ಯಾಧ್ಯಕ್ಷ ವರ್ತೂರು ಮಂಜುನಾಥ್ ಅಧ್ಯಕ್ಷತೆ ವಹಿಸಿ, ಈವರೆಗೆ ನಡೆಸಿದ ಸಮಾಜ ಸೇವಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಎಸ್ಸೆಎಸ್ಸೆಎಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ 13 ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಪ್ರೋತ್ಸಾಹಧನ ವಿತರಿಸಲಾಯಿತು.

ಉದ್ಯಮಿಗಳಾದ ಕುಮಾರ್, ಹೈದರ್, ಸಾಹುಲ್ ಹಮೀದ್, ರಾಜ್ಯ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ ಕಾಶಿಪಟ್ಣ, ಬಾಗಲಕೋಟೆ ಜಿಲ್ಲಾಧ್ಯಕ್ಷ ಮಂಜುನಾಥ ಮಾದರ, ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷ ಸುನೀಲ್ ಕುಮಾರ್, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಮನೋಜ್, ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಶಶಿಧರ್, ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷ ಪ್ರವೀಣ್, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಶಕುಂತಳಾ ಅತಿಥಿಗಳಾಗಿ ಭಾಗವಹಿಸಿದ್ದರು. ತಾಲೂಕು ಉಪಾಧ್ಯಕ್ಷ ರಂಜಿತ್ ಉಪಸ್ಥಿತರಿದ್ದರು.

ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಮೂಡುಬಿದಿರೆ ಪೇಟೆಯಲ್ಲಿ ಮೆರವಣಿಗೆ ಹಾಗೂ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.