ಮೂಡುಬಿದಿರೆ :ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘ, ಮಂಗಳೂರು ವತಿಯಿಂದ ಉಳ್ಳಾಲದ ಕಿನ್ಯಾ ಸಮೀಪದ ದೇವಿನಗರದಲ್ಲಿರುವ ಜೀವನ್ ಫಾರ್ಮ್‌ನಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಯೋಗವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವ ಮಹತ್ವದ ಸಾಧನವಾಗಿದ್ದು, ಪ್ರತಿಯೊಬ್ಬರೂ ತಮ್ಮ ದಿನನಿತ್ಯದ ಬದುಕಿನಲ್ಲಿ ಯೋಗಾಭ್ಯಾಸ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಯೋಗ ದಿನಾಚರಣೆಯ ಮಹತ್ವ ಹಾಗೂ ಆರೋಗ್ಯದ ಮೇಲೆ ಅದರ ಪರಿಣಾಮಗಳ ಕುರಿತು ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು.
ಯೋಗ ಶಿಕ್ಷಕ ಮೋನಪ್ಪ ಪೂಜಾರಿ ಯೋಗಾಭ್ಯಾಸದ ಪ್ರಯೋಜನಗಳ ಕುರಿತು ವಿವರಿಸಿ, ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಯೋಗದಿಂದ ದೇಹದ ಸುದೃಢತೆ, ಮಾನಸಿಕ ನೆಮ್ಮದಿ ಹಾಗೂ ಜೀವನಶೈಲಿಯ ಸುಧಾರಣೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಯೋಗ ಕ್ಷೇತ್ರದಲ್ಲಿ 33 ವರ್ಷಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೋನಪ್ಪ ಪೂಜಾರಿಯನ್ನು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ನೇಮಿರಾಜ್ ಪಿ., ನಿರ್ದೇಶಕರಾದ ಜಿ. ಪರಮೇಶ್ವರ ಪೂಜಾರಿ, ಆನಂದ್ ಎಸ್. ಕೊಂಡಾಣ, ರಮಾನಾಥ್ ಸನಿಲ್, ಬಿ.ಪಿ. ದಿವಾಕರ್, ಗೋಪಾಲ್ ಎಂ., ಉಮಾವತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್, ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಪ್ರಕಾಶನ ಮತ್ತು ಚಾರಿಟೆಬಲ್ ಟ್ರಸ್ಟ್‌ನ ಗೌರವಾಧ್ಯಕ್ಷ ವಾಮನ್ ಕೆ., ಜೀವನ್ ಫಾರ್ಮ್‌ನ ಮಾಲಕ ಧರ್ಮರಾಜ್ ಉಪಸ್ಥಿತರಿದ್ದರು.