ಮೂಡುಬಿದಿರೆ: ಹೊಸಂಗಡಿ ಮತ್ತು ಗುಂಡೂರಿ ಗ್ರಾಮ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಫಲ್ಗುಣಿ ನದಿ ತಟದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯನ್ನು ವಿರೋಧಿಸಿ ಸ್ಥಳೀಯ ಕೃಷಿಕರು ಮಂಗಳೂರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರಿಗೆ ಆಕ್ಷೇಪಣಾ ಪತ್ರ ಸಲ್ಲಿಸಿದ್ದಾರೆ.
ಸದಾಶಿವ, ರಾಮಣ್ಣ ಪೂಜಾರಿ, ಜಾಯ್ಲಸ್ ತಾಕೋಡೆ, ರೋಹನ್ ಕಾರ್ಡೋಜ ಅವರ ನೇತೃತ್ವದಲ್ಲಿ ಸಲ್ಲಿಸಿದ ದೂರಿನಲ್ಲಿ, ಕೆಲವು ವ್ಯಕ್ತಿಗಳು ಕಾನೂನುಬಾಹಿರವಾಗಿ ಮರಳು ತೆಗೆಯುತ್ತಿರುವುದಾಗಿ ಆರೋಪಿಸಲಾಗಿದೆ.
ಮಾರೂರು ಮತ್ತು ಪುಚ್ಚೆಮೊಗರು ಗ್ರಾಮದ ನೆತ್ತೋಡಿ ಪರಿಸರದಲ್ಲಿ ಸುಮಾರು 250ಕ್ಕೂ ಹೆಚ್ಚು ರೈತ ಕುಟುಂಬಗಳು ಕೃಷಿ ಹಾಗೂ ಕುಡಿಯುವ ನೀರಿಗಾಗಿ ಫಲ್ಗುಣಿ ನದಿಯನ್ನು ಅವಲಂಬಿಸಿಕೊಂಡಿವೆ. ಕಳೆದ 5–6 ವರ್ಷಗಳಿಂದ ಇಲ್ಲಿ ಮರಳು ಮಾಫಿಯಾ ಸಕ್ರಿಯವಾಗಿದ್ದು, ಜೆಸಿಬಿ ಮತ್ತು ಹಿತಾಚಿ ಯಂತ್ರಗಳನ್ನು ಬಳಸಿಕೊಂಡು ರಾತ್ರಿ ವೇಳೆ ಮರಳು ಸಾಗಾಟ ನಡೆಸಲಾಗುತ್ತಿದೆ ಎಂದು ರೈತರು ದೂರಿದ್ದಾರೆ.
ಈ ಅಕ್ರಮ ಚಟುವಟಿಕೆಯಿಂದ ನದಿಯ ನೀರಿನ ಒರತೆ ಕುಂಠಿತವಾಗುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ಗಂಭೀರ ಹಿನ್ನಡೆ ಉಂಟಾಗಿದೆ. ಜೊತೆಗೆ, ಮೂಡುಬಿದಿರೆ ಪುರಸಭೆಗೆ ನೀರು ಪೂರೈಸುವ ಅಣೆಕಟ್ಟಿನ ಸಮೀಪವೇ ಮರಳುಗಾರಿಕೆ ನಡೆಯುತ್ತಿರುವುದರಿಂದ ಪಟ್ಟಣದ ಕುಡಿಯುವ ನೀರಿನ ಮೇಲೂ ದುಷ್ಪರಿಣಾಮ ಬೀರುವ ಭೀತಿ ವ್ಯಕ್ತವಾಗಿದೆ.
ಗಣಿ ಇಲಾಖೆಯು ಇಲ್ಲಿ ಮರಳು ದಿಬ್ಬಗಳ ಬಗ್ಗೆ ಯಾವುದೇ ಅಧಿಕೃತ ಅಧಿಸೂಚನೆ ಹೊರಡಿಸದಿದ್ದರೂ, ಕೆಲವು ಮಂದಿ ಸರಕಾರಿ ಯೋಜನೆಗೆ ಮರಳು ಪೂರೈಸುವ ಪರವಾನಗಿ ಇದೆ ಎಂದು ಸುಳ್ಳು ಹೇಳಿ ದಂಧೆ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಕುರಿತು ಈಗಾಗಲೇ ಇಲಾಖೆಗೆ ಮಾಹಿತಿ ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿನ್ನೆಲೆ, ಕೂಡಲೇ ಗ್ರಾಮಸಭೆ ಕರೆದು ಸಾರ್ವಜನಿಕರ ಅಭಿಪ್ರಾಯ ಪಡೆಯಬೇಕು ಮತ್ತು ಅಕ್ರಮ ಮರಳುಗಾರಿಕೆಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ದೂರು ಪತ್ರದ ಪ್ರತಿಗಳನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಲೋಕಾಯುಕ್ತರಿಗೂ ರವಾನಿಸಲಾಗಿದೆ.
ಇದರ ಜೊತೆಗೆ, ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿದ ಕಿಸಾನ್ ಮುಖಂಡರು, ಇಲಾಖೆಯ ಮೌನವನ್ನು ಪ್ರಶ್ನಿಸಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಪರವಾನಗಿ ಇದ್ದರೆ ಅದರ ಪ್ರತಿಯನ್ನು ತಕ್ಷಣ ನೀಡಬೇಕು, ಇಲ್ಲದಿದ್ದರೆ ಸ್ಥಳದಲ್ಲೇ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಕೃಷಿಕರ ಒತ್ತಡಕ್ಕೆ ಮಣಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಕಿಸಾನ್ ಉಪಾಧ್ಯಕ್ಷ ರವಿರಾಜ್, ಪ್ರವೀಣ್ ಭಂಡಾರಿ, ಪ್ರಮುಖರಾದ ರೋಹನ್ ಕಾರ್ಡೋಜಾ, ಸದಾಶಿವ ಆರಂಬೋಡಿ, ರಾಮಣ್ಣ ಪೂಜಾರಿ ಗುಂಡೂರಿ, ಪ್ರವೀಣ್ ಕುಮಾರ್, ಮಹಿಳಾ ಪ್ರಮುಖರಾದ ಗುಲಾಬಿ ಮತ್ತು ಜಯಶೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅಕ್ರಮ ಮರಳುಗಾರಿಕೆಯನ್ನು ತಡೆಯದಿದ್ದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಚೇರಿ ಎದುರು ತೀವ್ರ ಪ್ರತಿಭಟನೆ ನಡೆಸುವುದಾಗಿ ರೋಹನ್ ಕಾರ್ಡೋಜಾ ಎಚ್ಚರಿಕೆ ನೀಡಿದ್ದಾರೆ.