ಮಂಗಳೂರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಕೆ.ಸಿ.ರೋಡ್ ಶಾಖೆಯ ತೃತೀಯ ವಾರ್ಷಿಕೋತ್ಸವದ ಪ್ರಯುಕ್ತ ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಮಂಗಳೂರು ನುರಿತ ವೈದ್ಯರ ತಂಡದ ಸಹಯೋಗದಲ್ಲಿ ಉಚಿತ ವೈದ್ಯಕೀಯ ಹಾಗೂ ಕಣ್ಣಿನ ತಪಾಸಣಾ ಶಿಬಿರವು ಕೆ.ಸಿ.ರೋಡ್ ಶಾಖೆಯ ಆವರಣದ ಉಚ್ಚಿಲಸ್ ಕಾಂಪ್ಲೆಕ್ಸ್‌ನಲ್ಲಿ ಜರುಗಿತು.

ಕೃಷ್ಣನಗರ ತಲಪಾಡಿಯ ಚಂದ್ರಶೇಖರ ಶಿಬಿರ ಉದ್ಘಾಟಿಸಿ ಮಾತನಾಡಿ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಸತತವಾಗಿ ಆರೋಗ್ಯ ಶಿಬಿರ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಶುಭ ಹಾರೈಸಿದರು.

ಕೆ.ಎಂ.ಸಿ. ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಉತ್ಕರ್ಷ್ ಆರೋಗ್ಯ ಸಮಸ್ಯೆಗಳ ಮುಂಜಾಗ್ರತೆ ಹಾಗೂ ಉಚಿತ ಶಿಬಿರದ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.

ಉಚ್ಚಿಲಸ್ ಕಾಂಪ್ಲೆಕ್ಸ್ ಮಾಲೀಕ ಅಬ್ಬಾಸ್ ಉಚ್ಚಿಲ್ ಮಾತನಾಡಿ, ಚಿತ್ತರಂಜನ್ ಬೋಳಾರ್ ಮುಂದಾಳತ್ವದಲ್ಲಿ ಸಂಘವು ಬ್ಯಾಂಕಿಂಗ್ ವ್ಯವಹಾರದ ಜೊತೆಗೆ ಸಾಮಾಜಿಕ ಕಳಕಳಿಯೊಂದಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದೆ ಎಂದರು.

ಕೆ.ಎಂ.ಸಿ. ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹರ್ಬಟ್ ಪಿರೇರಾ ಮಾತನಾಡಿ, ಶಿಬಿರದಲ್ಲಿ ಉಚಿತ ಕಣ್ಣಿನ ತಪಾಸಣೆ, ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ, ಬಿ.ಪಿ., ಮಧುಮೇಹ, ಎಲುಬು, ಕೀಲು, ಕಿವಿ, ಮೂಗು, ಗಂಟಲು ತಪಾಸಣೆ ಹಾಗೂ ಉಚಿತ ಔಷಧಿ ವಿತರಣೆ ಮಾಡಲಾಗುವುದು ಎಂದು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಉಪಾಧ್ಯಕ್ಷ ನೇಮಿರಾಜ್ ಪಿ. ಮಾತನಾಡಿ, ಇದು ಸಂಘದ 107ನೇ ಉಚಿತ ವೈದ್ಯಕೀಯ ಶಿಬಿರವಾಗಿದ್ದು, ರೋಗ ಬರುವ ಮುನ್ನವೇ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ ಎಂದು ತಿಳಿಸಿದರು. ಆರೋಗ್ಯ ಶಿಬಿರಕ್ಕೆ ಸಹಕರಿಸಿದ ಕೆ.ಎಂ.ಸಿ. ಆಸ್ಪತ್ರೆಯ ತಂಡ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ಆನಂದ ಎಸ್ ಕೊಂಡಾಣ, ಗೋಪಾಲ್ ಎಮ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್, ಜಗನ್ನಾಥ, ಕಾರ್ತಿಕ್ ಮತ್ತಿತರರು ಉಪಸ್ಥಿತರಿದ್ದರು.

ಎನ್.ಜಿ ವರ್ಲ್ಡ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಕೃಷ್ಣ ಭಜನಾ ಮಂದಿರ ಕೆ.ಸಿ ರೋಡ್ ಹಾಗೂ ಲಕ್ಷ್ಮಿ ಶಾಮಿಯಾನ ಪನೀರ್ ಇವರ ಸಹಯೋಗದೊಂದಿಗೆ ನಡೆದ ಶಿಬಿರದಲ್ಲಿ 150ಕ್ಕೂ ಹೆಚ್ಚು ಜನರು ಪ್ರಯೋಜನ ಪಡೆದರು. ಸೌಮ್ಯಲತಾ ಸ್ವಾಗತಿಸಿದರು, ಸಚಿನ್ ಕಾರ್ಯಕ್ರಮ ನಿರೂಪಿಸಿದರು ಹಾಗೂ ಶಿವರಾಮ್ ವಂದಿಸಿದರು.