ಮೂಡುಬಿದಿರೆ: ಪುಚ್ಚೆಮೊಗರು ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದ್ದು, ಪುರಸಭಾ ವ್ಯಾಪ್ತಿಯ ನಿವಾಸಿಗಳು ಹಾಗೂ ವ್ಯಾಪಾರಿಗಳು ತೀವ್ರ ಜಲಸಂಕಷ್ಟವನ್ನು ಎದುರಿಸುತ್ತಿದ್ದಾರೆ. ನೀರಿನ ಸುಗಮ ಪೂರೈಕೆಗೆ ಪುರಸಭೆ ಹರಸಾಹಸ ಪಡುತ್ತಿದೆ. ಅಣೆಕಟ್ಟಿನ ನೀರಿನ ಕೊರತೆಯಿಂದ ಮೂಡುಬಿದಿರೆ ಪ್ರದೇಶದಲ್ಲಿ ಮುನ್ನೆಚ್ಚರಿಕಾ ಪರಿಸ್ಥಿತಿ ನಿರ್ಮಾಣವಾಗಿದ್ದು, ಪುರಸಭೆ ಮತ್ತು ಗ್ರಾಮ ಪಂಚಾಯತ್‌ಗಳು ತಾತ್ಕಾಲಿಕ ಕ್ರಮಗಳ ಮೂಲಕ ಸಮಸ್ಯೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿವೆ. ಮಳೆಯ ಮೇಲೆ ಹೆಚ್ಚಿನ ಅವಲಂಬನೆ ಇರುವುದರಿಂದ ಮುಂದಿನ ದಿನಗಳು ನಿರ್ಣಾಯಕವಾಗಿವೆ. ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಸಾಮಾನ್ಯವಾಗಿ ಪುರಸಭಾ ವ್ಯಾಪ್ತಿಯಲ್ಲಿ ಪ್ರತಿದಿನ ನೀರು ಪೂರೈಕೆಯಾಗುತ್ತಿತ್ತು. ಆದರೆ ಏಪ್ರಿಲ್ 19ರ ನಂತರ ನೀರಿನ ಲಭ್ಯತೆ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ಈಗ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಸಾರ್ವಜನಿಕರ ಸಂಕಷ್ಟವನ್ನು ತಗ್ಗಿಸಲು ಪುರಸಭೆ 4 ಟ್ಯಾಂಕರ್‌ಗಳ ಮೂಲಕ ಪ್ರತಿದಿನ 60,000 ಲೀಟರ್‌ಗಿಂತ ಹೆಚ್ಚು ನೀರನ್ನು ಪೂರೈಕೆ ಮಾಡುತ್ತಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸುತ್ತಿದೆ.

ವೇಗವಾಗಿ ಕುಸಿದ ಅಣೆಕಟ್ಟಿನ ನೀರಿನ ಮಟ್ಟ ಕಳೆದ ಕೆಲವು ವರ್ಷಗಳಿಂದ ಸೋಹಂ ಪ್ರಾಜೆಕ್ಟ್‌ನಿಂದ ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಪುರಸಭೆಗೆ ನೀರು ಲಭ್ಯವಾಗುತ್ತಿತ್ತು. ಆದರೆ ಈ ಬಾರಿ ಕಾಮಗಾರಿ ನಡೆಯುತ್ತಿರುವ ಕಾರಣದಿಂದ ಆ ಮೂಲದಿಂದ ನೀರು ದೊರಕಿಲ್ಲ. ಪುರಸಭೆ ಮುನ್ನೆಚ್ಚರಿಕಾ ಕ್ರಮವಾಗಿ ನದಿಯ ಹೂಳೆತ್ತುವ ಕಾರ್ಯ ಕೈಗೊಂಡಿದ್ದರೂ, ಅತಿಯಾದ ಬಿಸಿಲಿನ ಪರಿಣಾಮವಾಗಿ ನದಿ ಭಾಗಶಃ ಬತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ತುಸು ನಿರಾಳತೆ ಇನ್ನೊಂದೆಡೆ, ತಾಲೂಕಿನ 12 ಗ್ರಾಮ ಪಂಚಾಯತ್‌ ವ್ಯಾಪ್ತಿಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿಲ್ಲ. ಕಳೆದ ವರ್ಷ ಉತ್ತಮ ಮಳೆಯಾಗಿರುವುದರಿಂದ ನದಿಗಳಲ್ಲಿ ಇನ್ನೂ ನೀರಿನ ಸಂಗ್ರಹವಿದೆ. ಮೂಡುಬಿದಿರೆ ಹಾಗೂ ಬಂಟ್ವಾಳ ತಾಲೂಕಿನ ಗಡಿ ಭಾಗದಲ್ಲಿರುವ ಫಲ್ಗುಣಿ ನದಿಯಿಂದ ಎರಡೂ ತಾಲೂಕುಗಳಿಗೆ ನೀರು ಪೂರೈಕೆಯಾಗುತ್ತಿದೆ. ಹೊಸಬೆಟ್ಟು ಪಂಚಾಯಿತಿಯ ಗಾಜಿಗಾರ ಪಲ್ಕೆಯಲ್ಲಿರುವ ಪರಿಶಿಷ್ಟ ಪಂಗಡದ ಕಾಲನಿಯ ಬೋರ್‌ವೆಲ್‌ನಲ್ಲಿ ಮಾತ್ರ ನೀರಿನ ಕೊರತೆ ಕಂಡುಬಂದಿದೆ. ಬೆಳುವಾಯಿ, ಪಾಲಡ್ಕ ಮತ್ತು ತೆಂಕಮಿಜಾರು ಗ್ರಾಮ ಪಂಚಾಯತ್‌ಗಳ ಕೆಲವು ಎತ್ತರ ಪ್ರದೇಶಗಳಲ್ಲಿ ತಾಂತ್ರಿಕ ಸಮಸ್ಯೆಯಿಂದ ನೀರಿನ ಪೂರೈಕೆ ನಿಧಾನವಾಗಿದೆ. ಆದರೆ ಶಿರ್ತಾಡಿ, ವಾಲ್ಪಾಡಿ, ನೆಲ್ಲಿಕಾರು, ದರೆಗುಡ್ಡೆ, ಪಡುಮಾರ್ನಾಡು, ಕಲ್ಲಮುಂಡ್ಕೂರು, ಪುತ್ತಿಗೆ ಹಾಗೂ ಇರುವೈಲು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯೂ ಸಹಾಯಕರವಾಗಿದೆ.

ಈಗಾಗಲೇ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಹಾಗೂ ಟ್ಯಾಂಕರ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಸಮೀಪದಲ್ಲಿ ಮಳೆಯಾದರೆ ಪರಿಸ್ಥಿತಿ ಸುಧಾರಿಸಲಿದೆ ಎಂದು ಪುರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

“ಮುನ್ನೆಚ್ಚರಿಕಾ ಕ್ರಮವಾಗಿ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮತ್ತು ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಶೀಘ್ರ ಮಳೆಯಾದರೆ ಯಾವುದೇ ಸಮಸ್ಯೆಯಾಗುವುದಿಲ್ಲ.” – ಇಂದು ಎಂ.,ಮುಖ್ಯಾಧಿಕಾರಿ, ಪುರಸಭೆ

ವಿಶೇಷ ವರದಿ: ಯಶೋಧರ ವಿ.ಬಂಗೇರ