ಮೂಡುಬಿದಿರೆ: ಸಂಪೂರ್ಣ ಶಿಲಾಮಯವಾಗಿ ನವೀಕರಣಗೊಂಡು ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ಹೊಸಂಗಡಿ ಮಾರೂರು ಶ್ರೀ ಗೋಪಾಲಕೃಷ್ಣ ಕೊಡಮಣಿತ್ತಾಯ ದೇವಾಲಯಕ್ಕೆ ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಗುರುವಾರ ಭೇಟಿ ನೀಡಿದರು. ದೇವಸ್ಥಾನ ಪ್ರವೇಶಿಸಿದ ಶ್ರೀಗಳು ದೇವರಿಗೆ ಆರತಿ ಬೆಳಗಿ ನಂತರ ಆಶೀರ್ವಚನ ನೀಡಿದರು. ಊರಿನ ದೇವಾಲಯದ ಜೀರ್ಣೋದ್ಧಾರವು ಸುಭಿಕ್ಷೆಯ ಸಂಕೇತವಾಗಿದೆ ಎಂದು ತಿಳಿಸಿದ ಶ್ರೀಗಳು, ಸುಂದರ ದೇಗುಲದ ಪುನರ್ ನಿರ್ಮಾಣವಾಗಿರುವ ಈ ಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ಸಮೃದ್ಧಿ, ಶಾಂತಿ ಮತ್ತು ನೆಮ್ಮದಿ ನೆಲೆಗೊಳ್ಳಲಿ ಎಂದು ಹಾರೈಸಿದರು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ವೆಂಕಟರಾಜ ಆಸ್ರಣ್ಣ ಸ್ವಾಮೀಜಿಯವರ ಪಾದಪೂಜೆ ನಡೆಸಿದರು. ವೇದಮೂರ್ತಿ ಮಾರೂರು ಖಂಡಿಗ ರಾಮದಾಸ ಆಸ್ರಣ್ಣ ಪಾದಕಾಣಿಕೆ ಸಲ್ಲಿಸಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ. ಶ್ರೀಪತಿ ಭಟ್, ಉಪಾಧ್ಯಕ್ಷರಾದ ಮಾರೂರು ಮಿತ್ತಬೆಟ್ಟು ಗುತ್ತು ಸುಧಾಕರ ಶೆಟ್ಟಿ, ಶ್ರೀಪತಿ ಉಪಾಧ್ಯಾಯ ಬಡಕೋಡಿ, ಕಾರ್ಯದರ್ಶಿ ಸುಶಾಂತ ಕರ್ಕೇರಾ, ಸ್ವಾಗತ ಸಮಿತಿ ಅಧ್ಯಕ್ಷ ರಮೇಶ್ ಎಸ್. ಶೆಟ್ಟಿ ಮಾರ್ನಾಡು, ಮಾರೂರು ಖಂಡಿಗ ಪ್ರಸನ್ನ ಆಸ್ರಣ್ಣ, ಶ್ರೀ ಕ್ಷೇತ್ರ ನಾಳದ ಪ್ರಧಾನ ಅರ್ಚಕ ರಾಘವೇಂದ್ರ ಆಸ್ರಣ್ಣ, ಅನಂತರಾಮ ಆಸ್ರಣ್ಣ ದಾವಣಗೆರೆ ಉಪಸ್ಥಿತರಿದ್ದರು.