ಮೂಡುಬಿದಿರೆ: ದೇವಸ್ಥಾನಗಳ ನವೀಕರಣ ಮತ್ತು ಬ್ರಹ್ಮಕಲಶೋತ್ಸವದಂತಹ ಪುಣ್ಯ ಕಾರ್ಯಗಳಿಂದ ಮಾನವನಿಗೆ ಪುಣ್ಯಾಂಶ ಪ್ರಾಪ್ತಿಯಾಗುತ್ತದೆ ಎಂದು ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಮದಾಸ ಆಸ್ರಣ್ಣ ತಿಳಿಸಿದರು.

ಮಾರೂರು ಹೊಸಂಗಡಿ ಶ್ರೀ ಗೋಪಾಲಕೃಷ್ಣ ಕೊಡಮಣಿತ್ತಾಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಹೊಸಂಗಡಿ ಅರಮನೆಯ ಪಟ್ಟದ ದೇವರು ಹಾಗೂ ಒಂಬತ್ತು ಮಾಗಣೆಗಳ ಒಡೆಯನಾದ ಈ ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯವು ದೈವ ಪ್ರೇರಣೆಯಿಂದಲೇ ನಡೆದಿದ್ದು, ಇದರಲ್ಲಿ ಕೈಜೋಡಿಸಿದ ಪ್ರತಿಯೊಬ್ಬ ಭಕ್ತರೂ ಅಭಿನಂದನೆಗೆ ಅರ್ಹರಾಗಿದ್ದಾರೆ ಎಂದು ಅವರು ನುಡಿದರು. ಜನ್ಮಜನ್ಮಾಂತರದ ಪುಣ್ಯದ ಫಲವಾಗಿ ಲಭಿಸಿದ ಮಾನವ ಜನ್ಮವು ಭಗವಂತನ ನಡೆಯಂತೆ ಸಾಗಿದಾಗ ಮಾತ್ರ ಸಾರ್ಥಕತೆ ಪಡೆಯಲು ಸಾಧ್ಯ ಎಂದು ಅವರು ಪ್ರತಿಪಾದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜೀವಂಧರ್ ಕುಮಾರ್ ಮಾತನಾಡಿ, ಕಾರ್ಯಾಧ್ಯಕ್ಷ ಶಂಭು ಶೆಟ್ಟಿ ಅವರ ಪರಿಶ್ರಮ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀಪತಿ ಭಟ್ ಅವರ ಮಾರ್ಗದರ್ಶನ ಹಾಗೂ ದಾನಿಗಳ ಉದಾರ ನೆರವಿನಿಂದ ದೇವಸ್ಥಾನ ಸುಂದರವಾಗಿ ನವೀಕರಣಗೊಂಡಿದೆ ಎಂದರು.ವಿಶೇಷವಾಗಿ ಸ್ಥಳೀಯ ಮುಸ್ಲಿಂ ಬಾಂಧವರು ನೀಡಿದ ಸಹಕಾರವನ್ನು ಅವರು ಸ್ಮರಿಸಿದರು.

ತೆಂಕಕಾರಂದೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಧರ್ಮದರ್ಶಿ ಕೃಷ್ಣ ಸಂಪಿಗೆತ್ತಾಯ ಅವರು ಮಾತನಾಡಿ, ದೇವಸ್ಥಾನಗಳಲ್ಲಿ ನಿತ್ಯ ಕೈಂಕರ್ಯಗಳನ್ನು ಉಳಿಸಿ ಬೆಳೆಸಲು ಸಂಘಟಿತ ಪ್ರಯತ್ನದ ಅಗತ್ಯವಿದೆ ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಕರ್ಣಾಟಕ ಬ್ಯಾಂಕ್ ಎಂ.ಡಿ. ರಾಘವೇಂದ್ರ ಭಟ್, ಗುರುವಾಯನಕೆರೆ ನವಶಕ್ತಿಯ ಶಶಿಧರ್ ಶೆಟ್ಟಿ ಬರೋಡಾ, ಎಂ.ಸಿ.ಎಸ್ ಬ್ಯಾಂಕ್‌ನ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಹಾಗೂ ಶರತ್ ಗೋರೆ ಉಪಸ್ಥಿತರಿದ್ದು ಶುಭಾಶಂಸನೆಗೈದರು. ಇದೇ ವೇಳೆ ಉಮೇಶ್ ಪೈ, ದೀಕ್ಷಿತ್ ಶೆಟ್ಟಿ, ರಮೇಶ್ ರೈ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿದ್ದರು. ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸಿದ ಮತ್ತು ಆರ್ಥಿಕ ನೆರವು ನೀಡಿದ ಶ್ರೀಧರ ಪೂಜಾರಿ ಕೆಮ್ಮಾರು ಬರ್ಕೆ, ಗೋಪಾಲ ಕೋಟ್ಯಾನ್ ಬಾಣೀಲು, ಶುಭಕರ ಪೂಜಾರಿ, ಆನಂದ ಹೆಗ್ಡೆ, ವಿಶ್ವನಾಥ ಹೆಗ್ಡೆ, ಬಲರಾಮ ಕೆ. ಎಸ್., ಬಾಲಕೃಷ್ಣ ಭಟ್ ಮತ್ತು ಶ್ರೀನಿವಾಸ ಭಟ್ ಅವರನ್ನು ಸನ್ಮಾನಿಸಲಾಯಿತು. ರವಿಪ್ರಸಾದ್ ಕೆ. ಶೆಟ್ಟಿ ಸ್ವಾಗತಿಸಿ, ಚಿಂತನಾ ಶೆಟ್ಟಿ ಪ್ರಾರ್ಥಿಸಿದರು. ಅಜಿತ್ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರೆ, ಶಂಕರ ಎ. ಕೋಟ್ಯಾನ್ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ಭಾಗವಾಗಿ ಯಕ್ಷಗಾನ ತಾಳಮದ್ದಲೆ ಹಾಗೂ ನೃತ್ಯ ಪ್ರದರ್ಶನಗಳು ಗಮನ ಸೆಳೆದವು.