ಮೂಡುಬಿದಿರೆ: ಇಲ್ಲಿನ ಶ್ರೀ ರಾಮಪುರ ಗೌರಿಕೆರೆಯ ದೇವಾಡಿಗರ ಸುಧಾರಕ ಸಂಘದ ಆಡಳಿತಕ್ಕೊಳಪಟ್ಟ ಶ್ರೀ ರಾಮ ಮಂದಿರದಲ್ಲಿ ಮೇ 6 ರಿಂದ 10 ರವರೆಗೆ ಸಪರಿವಾರ ಶ್ರೀ ರಾಮ ದೇವರ ಬಿಂಬ ಪುನರ್ ಪ್ರತಿಷ್ಠೆ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವ ವಿವಿಧ ಧಾರ್ಮಿಕ ವಿಧಿಗಳೊಂದಿಗೆ ಜರುಗಲಿದೆ ಎಂದು ಜೀರ್ಣೋದ್ದಾರ ಹಾಗೂ ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಪುರಂದರ ದೇವಾಡಿಗ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹೊರೆಕಾಣಿಕೆ ಮೆರವಣಿಗೆ
ಮೇ 6ರಂದು ಸಂಜೆ 4 ಗಂಟೆಗೆ ಮೂಡುಬಿದಿರೆ ಸ್ವರಾಜ್ಯ ಮೈದಾನದಿಂದ ಶ್ರೀ ಕ್ಷೇತ್ರಕ್ಕೆ ಹೊರೆಕಾಣಿಕೆ ಮೆರವಣಿಗೆ ಸಾಗಲಿದೆ. ಚೌಟರ ಅರಮನೆಯ ಕುಲದೀಪ್ ಎಂ. ಮೆರವಣಿಗೆ ಉದ್ಘಾಟಿಸಲಿದ್ದಾರೆ. ಅಂದು ಬೆಳಿಗ್ಗೆಯಿಂದ ಋತ್ವಿಜರ ಸ್ವಾಗತ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸೇರಿದಂತೆ ವಿವಿಧ ಹೋಮಗಳು ನಡೆದು ಮಹಾಪ್ರಸಾದ ವಿತರಣೆಯಾಗಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೇವಾಡಿಗರ ಸುಧಾರಕ ಸಂಘದ ಅಧ್ಯಕ್ಷ ಪುರಂದರ ದೇವಾಡಿಗ ಉದ್ಘಾಟಿಸಲಿದ್ದು, ಬಾಹುಬಲಿ ಪ್ರಸಾದ್, ಮಾಧವಿ ಎಸ್ ಭಂಡಾರಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಪ್ರತಿಷ್ಠಾ ಮಹೋತ್ಸವದ ವಿಧಿವಿಧಾನ ಮೇ 7ರಂದು ಶ್ರೀ ಸೀತಾ ರಾಮಚಂದ್ರ, ಲಕ್ಷ್ಮಣ, ಹನುಮಂತ ಪರಿವಾರ ಹಾಗೂ ರಕ್ಷೇಶ್ವರಿ, ಚಾಮುಂಡಿ ಬಿಂಬ ಪ್ರತಿಷ್ಠೆ, ಅಷ್ಟಬಂಧ ಲೇಪನ ನಡೆಯಲಿದೆ. ಮೇ 8ರಂದು ಬೆಳಿಗ್ಗೆ 9.51ಕ್ಕೆ ಮಿಥುನ ಲಗ್ನದ ಸುಮುಹೂರ್ತದಲ್ಲಿ ಶ್ರೀ ರಾಮ ದೇವರಿಗೆ 108 ಕಲಶಗಳೊಂದಿಗೆ ಬ್ರಹ್ಮಕಲಶಾಭಿಷೇಕ ನೆರವೇರಲಿದೆ. ಸಂಜೆ 6.30ಕ್ಕೆ ನಡೆಯುವ ಸಮುದಾಯ ಭವನ ಉದ್ಘಾಟನೆ ಹಾಗೂ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಚಿವರಾದ ದಿನೇಶ್ ಗುಂಡೂರಾವ್, ರಾಮಲಿಂಗಾ ರೆಡ್ಡಿ, ಸಭಾಪತಿ ಯು.ಟಿ. ಖಾದರ್, ಸಂಸದ ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್, ನಳಿನ್ ಕುಮಾರ್ ಕಟೀಲ್, ಮಿಥುನ ರೈ, ಡಾ. ಎಂ.ಎನ್. ರಾಜೇಂದ್ರ ಕುಮಾರ್, ಡಾ. ಎಂ. ಮೋಹನ ಆಳ್ವ ಸೇರಿದಂತೆ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದ ಪ್ರಮುಖರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ, ಭಜನಾ ಕಾರ್ಯಕ್ರಮ ಐದು ದಿನಗಳ ಕಾಲ ವಿವಿಧ ತಂಡಗಳಿಂದ ಭಜನೆ, ಸ್ಯಾಕ್ಸೋಫೋನ್ ವಾದನ, ಚೆಂಡೆ ವಾದನ, ನೃತ್ಯ ವೈವಿಧ್ಯ ಹಾಗೂ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಮೇ 9ರಂದು ಸೂರ್ಯಾಸ್ತದಿಂದ ಮರುದಿನ ಸೂರ್ಯೋದಯದವರೆಗೆ ಅಹೋರಾತ್ರಿ ಭಜನಾ ಸಂಕೀರ್ತನೆ ಹಮ್ಮಿಕೊಳ್ಳಲಾಗಿದೆ. ಮೇ 10ರಂದು ಮಹಾಚಂಡಿಕಾ ಯಾಗ, ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ಸಂಜೆ ರಕ್ಷೇಶ್ವರಿ ದೈವಕ್ಕೆ ಗಗ್ಗರ ಸೇವೆ ನಡೆಯುವುದರೊಂದಿಗೆ ಬ್ರಹ್ಮಕಲಶೋತ್ಸವ ಸಂಪನ್ನಗೊಳ್ಳಲಿದೆ ಎಂದು ಪುರಂದರ ದೇವಾಡಿಗ ಮಾಹಿತಿ ನೀಡಿದರು.
ಸಮಿತಿ ಕಾರ್ಯಾಧ್ಯಕ್ಷ ವಿಶ್ವನಾಥ ಪಿ. ದೇವಾಡಿಗ, ಗೌರವಾಧ್ಯಕ್ಷ ರತ್ನಾಕರ ಸಿ. ಮೊಯಿಲಿ, ದೇವಾಡಿಗ ಸಂಘದ ಕೋಶಾಧಿಕಾರಿ ಯಶೋಧರ ದೇವಾಡಿಗ, ಸಮಿತಿ ಸದಸ್ಯ ಸೋಮನಾಥ ಮೊಯಿಲಿ ಅಲಂಗಾರು ಸುದ್ದಿಗೊಷ್ಟಿಯಲ್ಲಿದ್ದರು.