ವೇಣೂರು: ತುಳುನಾಡು ಇಡೀ ಭಾರತದ ದೇವರಕೋಣೆ ಇದ್ದಂತೆ. ಪೊಸರಡ್ಕದ ಈ ಊರು ತುಳುನಾಡಿನ ಭಕ್ತಿ, ಮಮತೆ ಹಾಗೂ ಪ್ರೀತಿ ಬಾಂಧವ್ಯದ ನಾಡಿಯಾಗಿದೆ. ಹೃದಯ ಶ್ರೀಮಂತಿಕೆಯಿಂದ ನಿರ್ಮಿಸಿದ ಪೊಸರಡ್ಕ ಕ್ಷೇತ್ರ ನೂರಾರು ವರ್ಷಗಳ ಕಾಲ ಅಮರವಾಗಿರಲಿ, ಭಕ್ತಿಗೆ ಶಕ್ತಿಯಾಗಿ ದೈವಗಳು ಆಶೀರ್ವದಿಸಲಿ ಎಂದು ಧಾರ್ಮಿಕ ಮುಖಂಡ ಕಿರಣ್‌ಚಂದ್ರ ಪುಷ್ಪಗಿರಿ ನುಡಿದರು.

ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಪೊಸರಡ್ಕ ಶ್ರೀ ದೈವ, ಶ್ರೀ ಕೊಡಮಣಿತ್ತಾಯ, ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಬ್ರಹ್ಮಕುಂಭಾಭಿಷೇಕದ ಕೊನೆಯ ದಿನದ ಧಾರ್ಮಿಕ ಸಭೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಕೇಳ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕೆ. ಅನಂತ ಅಸ್ರಣ್ಣ ದೀಪ ಪ್ರಜ್ವಲಿಸಿ ಶುಭ ಕೋರಿದರು. ಬ್ರಹ್ಮಕುಂಭಾಭಿಷೇಕ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಂ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್. ಮಾತನಾಡಿ, ಪೊಸರಡ್ಕ ಕ್ಷೇತ್ರದ ಅಭಿವೃದ್ಧಿಯಲ್ಲಿ ಇಲ್ಲಿನ ಜನರ ಭಕ್ತಿ ಹಾಗೂ ವೈಶಾಲ್ಯತೆ ಅನಾವರಣಗೊಂಡಿದೆ. ಒಗ್ಗಟ್ಟು ಮತ್ತು ಸಮನ್ವಯತೆಯ ಮೂಲಕ ಐತಿಹಾಸಿಕವಾಗಿ ಕ್ಷೇತ್ರವನ್ನು ಪುನರ್ ನಿರ್ಮಿಸಲಾಗಿದೆ. ಇಂತಹ ಅಪೂರ್ವ ಸಮನ್ವಯತೆ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎಂದರು.

ಬೆಂಗಳೂರಿನ ಸ್ವಪ್ನ ಪ್ರವೀಣ್ ಪೂಜಾರಿ ಮಾತನಾಡಿ, ದೈವಸ್ಥಾನದ ಪುನರ್ ನಿರ್ಮಾಣವು ದೊಡ್ಡ ಪುಣ್ಯದ ಕೆಲಸವಾಗಿದ್ದು, ಇದರಲ್ಲಿ ಪಾಲ್ಗೊಂಡ ಎಲ್ಲರಿಗೂ ಒಳಿತಾಗಲಿ ಎಂದು ಹಾರೈಸಿದರು.

ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಆದಿತ್ಯ ಪಿ.ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ದೇರಾಜೆಬೆಟ್ಟ ಮತ್ತು ಪೊಸರಡ್ಕ ಕ್ಷೇತ್ರಕ್ಕೆ ಅವಿನಾಭಾವ ಸಂಬಂಧವಿದೆ. ಅಜೀರ್ಣಾವಸ್ಥೆಯಲ್ಲಿದ್ದ ದೇರಾಜೆಬೆಟ್ಟ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದರೆ ಪೊಸರಡ್ಕ ಕ್ಷೇತ್ರವನ್ನು ಬೆಳಗಲು ಸಾಧ್ಯ ಎಂಬ ಪ್ರಶ್ನಾಚಿಂತನೆಯ ನಿರ್ಧಾರದಂತೆ ಇಲ್ಲಿನ ಜನರು ದೇರಾಜೆಬೆಟ್ಟವನ್ನು ಪುನರ್ ನಿರ್ಮಿಸಿದರು. ಇದರಿಂದಾಗಿ ಈಗ ಪೊಸರಡ್ಕ ಕ್ಷೇತ್ರದ ಅಭಿವೃದ್ಧಿ ಸಾಧ್ಯವಾಗಿದೆ. ಹಿರಿಯರು ಆರಾಧಿಸಿಕೊಂಡು ಬಂದಿದ್ದ ಈ ಕ್ಷೇತ್ರವನ್ನು ಮೂರು ದಶಕಗಳ ಬಳಿಕ ಪುನರ್ ಪ್ರತಿಷ್ಠಾಪಿಸಿ ನೇಮೋತ್ಸವ ನಡೆಸಲಾಗಿದೆ. ದಾನಿಗಳ ಸಹಕಾರ ಹಾಗೂ ಕರಸೇವಕರ ಕೊಡುಗೆಯಿಂದ ಕ್ಷೇತ್ರ ಬೆಳಗುತ್ತಿದೆ ಎಂದರು.

ವೇದಿಕೆಯಲ್ಲಿ ಉಮಲತ್ತಡೆ ಶ್ರೀ ಕೊಡಮಣಿತ್ತಾಯ ಬೈದರ್ಕಳ ಸಮಿತಿ ಅಧ್ಯಕ್ಷ ಪ್ರವೀಣ್ ಭಟ್, ಬ್ರಹ್ಮಕುಂಭಾಭಿಷೇಕ ಸಮಿತಿ ಕಾರ್ಯಾಧ್ಯಕ್ಷ ಎಂ.ಎಸ್. ಪೂಜಾರಿ, ತಾರಾ ಕಿರಣ್‌ಚಂದ್ರ ಪುಷ್ಪಗಿರಿ, ಅತುಲ್ ಕುಮಾರ್ ಕೆ.ಎನ್. ಹಲೇಜಿ, ನಳಿನಿ ಪಿ.ಕೆ. ಮತ್ತೊಟ್ಟು ಮರೋಡಿ, ಲಾವಣ್ಯ ಬಳ್ಳಾಲ್, ಆಡಳಿತ ಸಮಿತಿ ಅಧ್ಯಕ್ಷ ಜಯವರ್ಮ ಬುಣ್ಣು, ಗೌರವಾಧ್ಯಕ್ಷರಾದ ರಾಜೇಂದ್ರ ಬಳ್ಳಾಲ್, ಹೇಮರಾಜ್ ಕೆ. ಬೆಳ್ಳಿಬೀಡು, ನಾರಾಯಣ ಪೂಜಾರಿ, ಪ್ರಧಾನ ಕಾರ್ಯದರ್ಶಿ ಶೀತಲ್ ಕುಮಾರ್ ಜೈನ್, ಸದಸ್ಯರಾದ ರವೀಂದ್ರ ಪೂಜಾರಿ ನಾಪ, ರಮೇಶ್ ಬಲಂತ್ಯರೊಟ್ಟು, ಜಿನೇಂದ್ರ ಜೈನ್ ಹರಂಬೆಟ್ಟುಗುತ್ತು, ಸುದರ್ಶನ ಜೈನ್ ಪಾಂಡಿಬೆಟ್ಟು ಗುತ್ತು, ಸತೀಶ್ ಕೆ. ಕಾಶಿಪಟ್ಣ ಉಪಸ್ಥಿತರಿದ್ದರು.

ಸತೀಶ್ ಉಚ್ಚೂರು ಪ್ರಾರ್ಥಿಸಿದರು. ಶಿಕ್ಷಕಿ ಸುಫಲ ಸ್ವಾಗತಿಸಿ, ದಿನೇಶ್ ರಾಯಿ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಅನಿಲ್ ಕುಮಾರ್ ಎಸ್., ಕಿರಣ್‌ಚಂದ್ರ ಪುಷ್ಪಗಿರಿ ದಂಪತಿ, ಸ್ವಪ್ನ ಪ್ರವೀಣ್ ಪೂಜಾರಿ ದಂಪತಿ ಹಾಗೂ ವಿವಿಧ ದಾನಿಗಳನ್ನು ಸನ್ಮಾನಿಸಲಾಯಿತು.

ಸಂಜೆ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ಕಲಾವಿದರಿಂದ 'ಸಿಂಧೂರ ಸಂಗ್ರಾಮ' ಯಕ್ಷಗಾನ ಮತ್ತು ರಾತ್ರಿ ಶ್ರೀ ಬ್ರಹ್ಮಬೈದರ್ಕಳ ಹಾಗೂ ಶ್ರೀ ಮಾಯಾಂದಲೆ ನೇಮೋತ್ಸವ ನಡೆಯಿತು. ಸಾವಿರಾರು ಭಕ್ತರು ಈ ಭಕ್ತಿಪೂರ್ವಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.