ಮೂಡುಬಿದಿರೆ: ಇಲ್ಲಿನ ಕೆಸರುಗದ್ದೆಯ ಸುನಂದಾ ಮಾಧವ ಪ್ರಭು ಸಭಾ ಭವನದಲ್ಲಿ ಶ್ರೀ ರಾಮ ಭಜನಾ ಮಂದಿರ ಕೆಸರುಗದ್ದೆ, ಮಿಜಾರು ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಹಾಗೂ ಆಳ್ವಾಸ್ ಆನಂದಮಯ ಆರೋಗ್ಯಧಾಮದ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ಶಿಬಿರವು ಮೇ 3ರಂದು ದಿನಪೂರ್ತಿ ನಡೆಯಿತು.
ಮೂಡುಬಿದಿರೆ ವೆಂಕಟರಮಣ ಮತ್ತು ಹನುಮಂತ ದೇವಸ್ಥಾನದ ಮೊಕ್ತೇಸರ ಎಂ. ದಯಾನಂದ ಪೈ ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಮೂಡುಬಿದಿರೆ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ರಘುವೀರ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶ್ರೀರಾಮ ಭಜನಾ ಮಂಡಳಿಯ ಅಧ್ಯಕ್ಷ ರಾಜೇಶ್ ಕಾಮತ್, ವಾಸ್ತು ತಜ್ಞ ಎಂ.ರಾಘವೇಂದ್ರ ಭಂಡಾರ್ಕರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಲೇಜಿನ ವೈದ್ಯೆ, ಅಸೋಸಿಯೇಟ್ ಪ್ರೊಫೆಸರ್ ಮತ್ತು ಮೆಡಿಕಲ್ ಆಫೀಸರ್ ಡಾ.ಸ್ವಾತಿ ಕೆ ವಿ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಡಾ. ಶ್ರೀನಿವಾಸ ಶೆಣೈ ಮಾತನಾಡಿ, ಪ್ರಕೃತಿ ಚಿಕಿತ್ಸೆ ಮತ್ತು ಯೋಗದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಾಮರ್ಥ್ಯವಿದೆ. ಈ ಚಿಕಿತ್ಸೆಯ ಮೂಲಕ ಯಾವುದೇ ಕಾಯಿಲೆಯನ್ನು ಹತೋಟಿಯಲ್ಲಿಡುವುದರ ಜೊತೆಗೆ ಸಂಪೂರ್ಣವಾಗಿ ಗುಣಪಡಿಸುವ ಶಕ್ತಿ ಪ್ರಾಚೀನ ಹಾಗೂ ಪರಂಪರಾಗತ ಪದ್ಧತಿಯಾದ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯಲ್ಲಿದೆ. ಜನರು ಇಂತಹ ಶಿಬಿರಗಳ ಮಹತ್ವ ಅರಿತು ಸದುಪಯೋಗ ಪಡಿಸಿಕೊಳ್ಳಬೇಕು. ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ವೈದ್ಯರು ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ವಿದ್ಯಾರ್ಥಿನಿ ಭೂಮಿಕಾ ಟಿ ಮನೆಕೋಟಿ ಸ್ವಾಗತಿಸಿದರು. ಗಣ್ಯರಾದ ಕೃಷ್ಣ ಶೆಣೈ, ನಿರ್ಮಲಾ ಆರ್ ಕಾಮತ್, ವಿವೇಕ ಪ್ರಭು, ವಿಠ್ಠಲ ಪ್ರಭು, ನಿತಿನ್ ಕಾಮತ್, ಪ್ರದ್ಯೋತ್ ಪ್ರಭು ಹಾಗೂ ಸುಕುಮಾರ ಶೆಟ್ಟಿ ಉಪಸ್ಥಿತರಿದ್ದರು.
ಸುನಂದಾ ಮಾಧವ ಪ್ರಭು ಸಭಾಭವನದ ಮಾಲೀಕ ವಿಶ್ವನಾಥ ಪ್ರಭು ಶಿಬಿರದ ಪ್ರಯೋಜನ ಜನರಿಗೆ ತಲುಪಲಿ ಎಂಬ ಉದ್ದೇಶದಿಂದ ಸಭಾಭವನವನ್ನು ಉಚಿತವಾಗಿ ನೀಡಿ ಸಹಕರಿಸಿದರು. ವಿದ್ಯಾರ್ಥಿನಿ ಭೂಮಿಕಾ ಟಿ. ಮನೆಕೋಟಿ ವಂದಿಸಿದರು.