ಮೂಡುಬಿದಿರೆ: ಬಂಟ್ವಾಳ ತಾಲೂಕಿನ ಕಂಚಿಕಾರಪೇಟೆ ಬಸ್ತಿಪಡ್ಪುವಿನ ಯುವಕ ಕೌಶಿಕ್ ಆಚಾರ್ಯ ಶಾರೀರಿಕ ಸವಾಲುಗಳನ್ನು ಮೆಟ್ಟಿ ನಿಂತು ‘ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಸ್ಥಾನ ಪಡೆಯುವ ಮೂಲಕ ಗಮನಸೆಳೆದಿದ್ದಾರೆ.
ಹುಟ್ಟಿನಿಂದಲೇ ಕೈಗಳಿಲ್ಲದ ಕೌಶಿಕ್ ಆಚಾರ್ಯ ತಮ್ಮ ಆತ್ಮವಿಶ್ವಾಸ ಹಾಗೂ ಅದ್ಭುತ ಪ್ರತಿಭೆಯ ಬಲದಿಂದ ಕೇವಲ 3 ನಿಮಿಷ 40 ಸೆಕೆಂಡುಗಳಲ್ಲಿ ಸ್ವಾಮಿ ವಿವೇಕಾನಂದರ ತಲೆಕೆಳಗಿನ ಚಿತ್ರವನ್ನು ಕಾಲಿನ ಸಹಾಯದಿಂದ ರಚಿಸಿದ್ದಾರೆ. ಈ ಕಲಾಕೃತಿಗಾಗಿ ಗ್ಲೂ ಮತ್ತು ಅರಿಶಿನ ಪುಡಿಯನ್ನು ಬಳಸಲಾಗಿದ್ದು, ಕೌಶಿಕ್ ಆಚಾರ್ಯ ಅವರ ಈ ವಿಶಿಷ್ಟ ಪ್ರಯತ್ನ ಹೊಸ ದಾಖಲೆಗೆ ಸಾಕ್ಷಿಯಾಗಿದೆ.
ಯಾರಿಗೂ ಹೊರೆಯಾಗಬಾರದು ಎನ್ನುವ ದೃಢ ಸಂಕಲ್ಪ ಮಾಡಿರುವ ಕೌಶಿಕ್ ಆಚಾರ್ಯ, ದಿನನಿತ್ಯದ ಚಟುವಟಿಕೆಗಳನ್ನು ಕಾಲಿನ ಸಹಾಯದಿಂದಲೇ ನಿರ್ವಹಿಸುತ್ತಾ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ತಮ್ಮ ಈ ಸಾಧನೆಯ ಹಿಂದೆ ತಾಯಿ, ತಂದೆ ಮತ್ತು ಅಣ್ಣನ ಬೆಂಬಲ ಬೆಟ್ಟದಂತಿದೆ ಎಂದು ಕೌಶಿಕ್ ಆಚಾರ್ಯ ನೆನೆಯುತ್ತಾರೆ. ಅವರ ಉನ್ನತ ಶಿಕ್ಷಣದ ಜವಾಬ್ದಾರಿಯನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಎಂ. ಮೋಹನ ಆಳ್ವ ವಹಿಸಿಕೊಂಡಿದ್ದು, ಸಂಸ್ಥೆಯ ವತಿಯಿಂದ ಪ್ರತಿಯೊಂದು ಚಟುವಟಿಕೆಗೂ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ. ದಾಖಲೆ ನಿರ್ಮಾಣದ ಸಮಯದಲ್ಲಿ ಆಳ್ವಾಸ್ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವ ನೀಡಿದ ಪ್ರೋತ್ಸಾಹ ಸ್ಮರಣೀಯ ಎಂದು ಕೌಶಿಕ್ ಆಚಾರ್ಯ ತಿಳಿಸಿದ್ದಾರೆ.
ಕೇವಲ ಚಿತ್ರಕಲೆ ಮಾತ್ರವಲ್ಲದೆ ನೃತ್ಯ, ಈಜು ಹಾಗೂ ನಟನೆಯಲ್ಲಿಯೂ ಕೌಶಿಕ್ ಆಚಾರ್ಯ ಆಸಕ್ತಿ ಹೊಂದಿದ್ದಾರೆ. ಕಾಲಿನ ಮೂಲಕವೇ ಅನೇಕ ಸಾಧಕರ ಮತ್ತು ಸಮಾಜಸೇವಕರ ಚಿತ್ರಗಳನ್ನು ರಚಿಸಿ ಅವರಿಗೆ ಉಡುಗೊರೆಯಾಗಿ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬಾಲ್ಯದಿಂದಲೇ ತಾಯಿಯ ಪ್ರೇರಣೆಯೊಂದಿಗೆ ಬೆಳೆದಿರುವ ಇವರು ಸದ್ಯ ಆಳ್ವಾಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂ.ಎಸ್.ಡಬ್ಲ್ಯೂ ವ್ಯಾಸಂಗ ಮಾಡುತ್ತಿದ್ದಾರೆ. ಈ ಹಂತದವರೆಗೆ ಬೆಳೆಯಲು ತಾಯಿಯ ನಿರಂತರ ಕಾಳಜಿಯೇ ಕಾರಣ ಎಂದು ತಿಳಿಸಿದ್ದಾರೆ.