ಮೂಡುಬಿದಿರೆ: ಜಮೀಯತುಲ್ ಫಲಾಹ್ ಮೂಡುಬಿದಿರೆ ತಾಲೂಕು ಘಟಕದ ವತಿಯಿಂದ ಸಮುದಾಯದ ಸೇವೆಗಾಗಿ 'ಸಮನ್ವಯ' ಎಂಬ ಸ್ನೇಹಪೂರ್ವಕ ಸಮಾಗಮ ಕಾರ್ಯಕ್ರಮ ಮೂಡುಬಿದಿರೆ ಎಂ.ಸಿ.ಎಸ್.ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು. ಜಮೀಯತುಲ್ ಫಲಾಹ್ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾಧ್ಯಕ್ಷ ಅಶ್ಫಾಕ್ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷ ಶೇಖ್ ನೂರುದ್ದೀನ್ ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸಿದರು. ಜಮೀಯತುಲ್ ಫಲಾಹ್ ವತಿಯಿಂದ ನಡೆಯುತ್ತಿರುವ ವಿವಿಧ ಶಿಕ್ಷಣ ಹಾಗೂ ಸಾಮಾಜಿಕ ಸೇವಾ ಯೋಜನೆಗಳ ಕುರಿತು ಸಭೆಯಲ್ಲಿ ಮಾಹಿತಿ ನೀಡಲಾಯಿತು. ವಿಶೇಷವಾಗಿ ಬೆಳುವಾಯಿ-ಚಿಲಿಂಬಿ ಬಳಿಯ ಗ್ರೀನ್ ವ್ಯೂ ಕಾನೂನು ಕಾಲೇಜು ಯೋಜನೆ, ಮಂಗಳೂರಿನ ಮಹಿಳಾ ಹಾಸ್ಟೆಲ್ ಯೋಜನೆ, ಉಡುಪಿಯ ವಿದ್ಯಾರ್ಥಿ ಹಾಸ್ಟೆಲ್ ಯೋಜನೆ, ಅಡ್ಕರೆಪಡ್ಪುವಿನ ಗ್ರೀನ್ ವ್ಯೂ ಶಾಲೆಯ ವಿಸ್ತರಣಾ ಯೋಜನೆ ಹಾಗೂ ಐಟಿ ಇಂಟೆಗ್ರೇಷನ್ ಯೋಜನೆಗಳ ಬಗ್ಗೆ ಬೆಳಕು ಚೆಲ್ಲಲಾಯಿತು. ನಿಕಟಪೂರ್ವ ಅಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಹತ್ತು ಮಂದಿ ಯುವಕರು ಜಮೀಯತುಲ್ ಫಲಾಹ್ ಸಂಘಟನೆಯ ಅಜೀವ ಸದಸ್ಯರಾಗಿ ಸೇರ್ಪಡೆಗೊಂಡರು. ಸಂಸ್ಥೆಯ ಹಿರಿಯ ಸದಸ್ಯ ಎಂ.ಎಚ್.ಇಕ್ಬಾಲ್ ಬಂಟ್ವಾಳ ಅವರನ್ನು ಖಜಾಂಚಿ ಎಸ್.ಎ.ಗಫೂರ್ ಸನ್ಮಾನಿಸಿದರು. ಅಶ್ಫಾಕ್ ಅಹ್ಮದ್ ಹಾಗೂ ಕೆ.ಕೆ.ಶಾಹುಲ್ ಹಮೀದ್ ಅವರನ್ನು ಕೂಡ ಸನ್ಮಾನಿಸಲಾಯಿತು. ಕಾರ್ಯದರ್ಶಿ ಅಶ್ರಫ್ ಮರೋಡಿ ಸ್ವಾಗತಿಸಿ, ಮಾಜಿ ಅಧ್ಯಕ್ಷ ಅಬ್ದುಲ್ ರವೂಫ್ ವಂದಿಸಿದರು.