ಮೂಡುಬಿದಿರೆ: ಕೃಷಿ ಎಂಬುದು ಎಂದಿಗೂ ಲಾಭದಾಯಕ ವೃತ್ತಿ. ತಾನು ಮತ್ತು ತನ್ನ ಪತ್ನಿ ಉನ್ನತ ಶಿಕ್ಷಣ ಪಡೆದಿದ್ದರೂ ಹಲಸಿನ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇವೆ. ಇಂದು ಅಮೇರಿಕಾದಲ್ಲಿ ದುಡಿಯುವ ಎಂಜಿನಿಯರ್‌ಗಳಿಗಿಂತಲೂ ಹೆಚ್ಚಿನ ಆದಾಯ ಗಳಿಸಿ ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ ಎಂದು ದೊಡ್ಡಬಳ್ಳಾಪುರದ ಹಲಸು ಕೃಷಿ ಸಾಧಕ ಅಶೋಕ್ ಕೆ. ಎಸ್. ಅಭಿಪ್ರಾಯಪಟ್ಟರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಪವರ್ ಫ್ರೆಂಡ್ಸ್ ಬೆದ್ರ, ವಂಶಿ ಇವೆಂಟ್ಸ್, ಬೆನಕ ಇವೆಂಟ್ಸ್ ಹಾಗೂ ಜೇಸಿಐ ಮೂಡುಬಿದಿರೆ ತ್ರಿಭುವನ್ ಸಂಯುಕ್ತ ಆಶ್ರಯದಲ್ಲಿ ವಿದ್ಯಾಗಿರಿಯ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ಬೃಹತ್ ಹಲಸು ಮೇಳದ ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಹಲಸಿನ ಹಣ್ಣಿನ ವೈವಿಧ್ಯಮಯ ಖಾದ್ಯಗಳು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ನುರಿತ ಮಾರಾಟಗಾರರ ವಿಶೇಷ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದೊಂದಿಗೆ ಈ ಮೇಳ ಸಂಪನ್ನಗೊಂಡಿತು. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಪವರ್ ಫ್ರೆಂಡ್ಸ್ ಮತ್ತು ವಿವಿಧ ಸಂಘಟನೆಗಳು ಒಟ್ಟಾಗಿ ಸೇರಿ ವಿಶೇಷ ರೀತಿಯಲ್ಲಿ ಹಲಸು ಮೇಳವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು. ಉದ್ಯಮಿಗಳಾದ ಅಜೇಯ್ ಪುರುಷೋತ್ತಮ್, ರಕ್ಷಿತ್ ಕರ್ಕೇರಾ, ಕುಮಾರ್ ಪೂಜಾರಿ, ಸರ್ವೋದಯ ಫ್ರೆಂಡ್ಸ್ ಅಧ್ಯಕ್ಷ ಗುರು, ಫ್ರೆಂಡ್ಸ್ ಇಲೆವೆನ್ ರಘುನಾಥ ದೇವಾಡಿಗ, ಪವರ್ ಫ್ರೆಂಡ್ಸ್ ಅಧ್ಯಕ್ಷ ವಿನಯ್ ಕುಮಾರ್, ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ದಿಲೀಪ್, ಜೇಸಿಐ ಅಧ್ಯಕ್ಷ ಸುಧಾಕರ ಶೆಟ್ಟಿ, ಲಾಡಿ ಫ್ರೆಂಡ್ಸ್ ಅಧ್ಯಕ್ಷ ರಕ್ಷಿತ್ ಕರ್ಕೇರಾ, ಯುವವಾಹಿನಿಯ ಮೂಡುಬಿದಿರೆ ಅಧ್ಯಕ್ಷ ಗಿರೀಶ್, ಮೊಬೈಲ್ ಅಸೋಸಿಯೇಷನ್ ಕಾರ್ಯದರ್ಶಿ ಅವಿನಾಶ್ ಹಾಗೂ ಬೆನಕ ಇವೆಂಟ್ಸ್ ಭಾಸ್ಕರ್ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವಂಶಿ ಇವೆಂಟ್ಸ್ ರಮಿತಾ ಸೂರ್ಯವಂಶಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪವರ್ ಫ್ರೆಂಡ್ಸ್ ಸದಸ್ಯ ಶಂಕರ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ ಸನ್ಮಾನ ಪತ್ರ ವಾಚಿಸಿದರು.