ಮೂಡುಬಿದಿರೆ: ಇಲ್ಲಿನ ಬನ್ನಡ್ಕ ಹೆದ್ದಾರಿಯ ಫ್ಲೈಓವರ್ ಬಳಿ ಭಾನುವಾರ ರಾತ್ರಿ ರಸ್ತೆ ಡೈವರ್ಸನ್ ಕಲ್ಲಿಗೆ ಕಾರು ಡಿಕ್ಕಿ ಹೊಡೆದು ಜಖಂಗೊಂಡಿದೆ. ಕಾರ್ಕಳ ಕಡೆಯಿಂದ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ರಸ್ತೆಯ ತಡೆಗೆ ಡಿಕ್ಕಿ ಹೊಡೆದಿದ್ದು, ಅಪಘಾತದ ತೀವ್ರತೆಗೆ ಕಾರಿನ ಮುಂಭಾಗ ಜಖಂಗೊಂಡಿದೆ. ಕಾರಿನಲ್ಲಿದ್ದವರು ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.
ಕಳೆದ ಹಲವು ತಿಂಗಳಿನಿಂದ ಈ ಭಾಗದಲ್ಲಿ ಅವೈಜ್ಞಾನಿಕವಾಗಿ ಕಾಮಗಾರಿ ನಡೆಯುತ್ತಿರುವುದು ಅಪಘಾತಗಳಿಗೆ ಮುಖ್ಯ ಕಾರಣವಾಗಿದೆ. ಹೆದ್ದಾರಿ ಹಾಗೂ ಸರ್ವಿಸ್ ರಸ್ತೆಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೆ ಪದೇ ಪದೇ ರಸ್ತೆ ತಿರುವುಗಳನ್ನು ಬದಲಾಯಿಸುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಬನ್ನಡ್ಕದ ಇದೇ ಸ್ಥಳದಲ್ಲಿ ಈ ಹಿಂದೆ ನಡೆದ ಹಲವು ಅಪಘಾತಗಳಲ್ಲಿ ಸಾವು-ನೋವುಗಳು ಸಂಭವಿಸಿವೆ. ಹೆದ್ದಾರಿ ಪ್ರಾಧಿಕಾರ ಇನ್ನು ಮುಂದಾದರೂ ಎಚ್ಚೆತ್ತುಕೊಂಡು ವೈಜ್ಞಾನಿಕವಾಗಿ ಕಾಮಗಾರಿ ನಡೆಸಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.