ಮೂಡುಬಿದಿರೆ:ಮಂಗಳೂರು - ಮೂಡುಬಿದಿರೆ - ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ಬನ್ನಡ್ಕ ಪ್ರದೇಶದಲ್ಲಿ ಸಂಭವಿಸುತ್ತಿರುವ ಸರಣಿ ಅಪಘಾತಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಸ್‌ಕೆಎಫ್ ಕೈಗಾರಿಕೆಯ ಬಳಿ ರಸ್ತೆ ಸಮತಟ್ಟಾಗಿಲ್ಲದಿರುವುದು, ವಾಹನಗಳ ಗೋಚರತೆಯ ಕೊರತೆ ಮತ್ತು ಅಮನಬೆಟ್ಟು ಕ್ರಾಸ್‌ನಲ್ಲಿ ರಸ್ತೆಯು ಹೆದ್ದಾರಿಗಿಂತ ತೀರಾ ಕೆಳಮಟ್ಟದಲ್ಲಿರುವುದು ಅಪಘಾತಗಳಿಗೆ ಪ್ರಮುಖ ಕಾರಣ ಎಂದು ಸ್ಥಳೀಯರಾದ ಸೂರಜ್ ಜೈನ್ ಹಾಗೂ ಸುಧಾಕರ ಆಚಾರ್ಯ ಶಾಸಕರ ಗಮನಕ್ಕೆ ತಂದರು. ಮೇ 20ರೊಳಗೆ ಸರ್ವಿಸ್ ರಸ್ತೆ ಕಾಮಗಾರಿ ಆರಂಭಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಸಿದ ಹಿನ್ನೆಲೆಯಲ್ಲಿ, ಶಾಸಕರು ಅಧಿಕಾರಿಗಳಿಗೆ ತಕ್ಷಣದ ಕ್ರಮಕ್ಕೆ ಸೂಚಿಸಿದರು. ಎಸ್‌ಕೆಎಫ್ ಮತ್ತು ಬನ್ನಡ್ಕ ಗರಡಿ ಮುಂಭಾಗದ ಹೆದ್ದಾರಿ ಪ್ರವೇಶವನ್ನು ತಾತ್ಕಾಲಿಕವಾಗಿ ಬಂದ್ ಮಾಡಬೇಕು ಹಾಗೂ ಕೂಡಲೇ 600 ಮೀಟರ್ ಉದ್ದದ ಸರ್ವಿಸ್ ರಸ್ತೆ ಕಾಮಗಾರಿ ಪ್ರಾರಂಭಿಸಬೇಕು ಎಂದು ಉಮಾನಾಥ್ ಕೋಟ್ಯಾನ್ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಂಜಿನಿಯರ್‌ಗಳು ಮತ್ತು ಡಿಬಿಎಲ್ ಕಂಪನಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅಮನಬೆಟ್ಟು ಕ್ರಾಸ್ ರಸ್ತೆಯನ್ನು ಎತ್ತರಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ತಿಳಿಸಿದರು. ಅಧಿಕಾರಿಗಳು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಕೂಡಲೇ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಬಳಿಕ ಮಾತನಾಡಿದ ಶಾಸಕರು, ಸ್ಥಳೀಯರ ಸಲಹೆಗಳನ್ನು ಪರಿಗಣಿಸಲಾಗಿದ್ದು, ವಾಹನ ಸವಾರರು ಸಹ ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸಹಕರಿಸಬೇಕು ಎಂದರು. ತಹಸೀಲ್ದಾರ್ ಶ್ರೀಧರ ಮುಂದಲಮನಿ, ಹೆದ್ದಾರಿ ಇಲಾಖೆಯ ಇಂಜಿನಿಯರ್ ಮಹಮ್ಮದ್ ನಾಝಿರ್, ಡಿಬಿಎಲ್ ಅಧಿಕಾರಿಗಳಾದ ಪ್ರಸಾದ್, ಬಾಲಾಜಿ, ರಾಘವ್‌ರಾವ್, ಪಿಡಿಒ ಸಾಯೀಶ್ ಚೌಟ, ಸಬ್ ಇನ್ಸ್‌ಪೆಕ್ಟರ್ ಕೃಷ್ಣಪ್ಪ ಮುಖಂಡರಾದ ರಂಜಿತ್ ಪೂಜಾರಿ, ವಿಶ್ವನಾಥ ಕಾಮತ್,ನಮ್ಮ ಮೂಡುಬಿದಿರೆ ಫಾರಂನ ಅಕ್ಷಯ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.