ಮೂಡುಬಿದಿರೆ: ಕೇರಳದ ಶಿವಗಿರಿ ಮಠದ ಪದ್ಮಶ್ರೀ ವಿಶುದ್ಧಾನಂದ ಸ್ವಾಮೀಜಿ ಅವರು ಮಂಗಳೂರಿನ ಪಡೀಲ್‌ನಲ್ಲಿರುವ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಪ್ರಧಾನ ಕಛೇರಿ 'ಆತ್ಮಶಕ್ತಿ ಸೌಧ'ಕ್ಕೆ ಭೇಟಿ ನೀಡಿದರು. ಕೇರಳದ ಶಿವಗಿರಿಯ ನಾರಾಯಣ ಗುರು ಧರ್ಮ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು 2019ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು. ಕೇರಳದ ಅಲಪ್ಪುಝ ಜಿಲ್ಲೆಯ ಕಾಯಂಕುಳಂ ಮಠದ ಸುಮಾರು 48 ಮಂದಿ ಅನುಯಾಯಿಗಳೊಂದಿಗೆ ಆಗಮಿಸಿದ ಸ್ವಾಮೀಜಿಯವರನ್ನು ಸಂಘದ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಸ್ವಾಮೀಜಿಯವರನ್ನು ಭಕ್ತಿಯಿಂದ ಸತ್ಕರಿಸಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ನೇಮಿರಾಜ್ ಪಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್, ಸಹಾಯಕ ಪ್ರಬಂಧಕ ವಿಶ್ವನಾಥ, ಹಿರಿಯ ಶಾಖಾಧಿಕಾರಿ ಹರಿಣಾಕ್ಷಿ ಪ್ರಶಾಂತ್ ಪಾಲ್ಗೊಂಡಿದ್ದರು. ನಾರಾಯಣ ಗುರು ಧರ್ಮ ಪ್ರಸರಣ ಸೇವಾ ಟ್ರಸ್ಟ್ ಮಂಗಳೂರು ಇದರ ವ್ಯವಸ್ಥಾಪಕ ಟ್ರಸ್ಟಿ ರಾಮಚಂದ್ರ ಪೂಜಾರಿ ದೇರೆಬೈಲ್ ಉಪಸ್ಥಿತರಿದ್ದರು.