ಮೂಡುಬಿದಿರೆ: ಮಂಗಳೂರು–ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆರಂಭವಾದ ಬಳಿಕ ಮೂಡುಬಿದಿರೆಯ ಬನ್ನಡ್ಕ ಪ್ರದೇಶ ಅಪಘಾತಗಳ ಹಾಟ್‌ಸ್ಪಾಟ್ ಆಗಿ ಮಾರ್ಪಟ್ಟಿದೆ. ಕಾಮಗಾರಿಯ ಅವ್ಯವಸ್ಥೆ, ಅವೈಜ್ಞಾನಿಕ ಡೈವರ್ಷನ್ ಹಾಗೂ ಸಮರ್ಪಕ ಸುರಕ್ಷತಾ ಕ್ರಮಗಳ ಕೊರತೆಯಿಂದ ವಾಹನ ಸವಾರರು ಜೀವ ಭಯದಲ್ಲಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಕಳೆದ ಒಂದು ವರ್ಷದ ಅವಧಿಯಲ್ಲಿ ಈ ಭಾಗದಲ್ಲಿ 20ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, ಸಾವು-ನೋವುಗಳ ಸಂಖ್ಯೆ ದಿನೇದಿನೇ ಏರಿಕೆಯಾಗುತ್ತಿದೆ. ಇತ್ತೀಚಿನ ಕೆಲವೇ ದಿನಗಳಲ್ಲಿ ಸರಣಿ ಅಪಘಾತಗಳು ನಡೆದಿರುವುದು ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಬನ್ನಡ್ಕದಿಂದ ಬೆಳುವಾಯಿ ಭಾಗದವರೆಗೆ ಅನೇಕರು ಪ್ರಾಣ ಕಳೆದುಕೊಂಡ ಘಟನೆಗಳು ದಾಖಲಾಗಿವೆ.
ಸರ್ವಿಸ್ ರಸ್ತೆ, ಡೈವರ್ಷನ್‌ಗಳಲ್ಲೇ ಹೆಚ್ಚು ಅಪಘಾತ
ಬನ್ನಡ್ಕ, ಕೇಸರ್ಗದ್ದೆ ಹಾಗೂ ಬೆಳುವಾಯಿ ಭಾಗಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಸಂಪರ್ಕ ಕಲ್ಪಿಸಿರುವ ಡೈವರ್ಷನ್‌ಗಳು ಸಮರ್ಪಕ ಯೋಜನೆಯಿಲ್ಲದೆ ನಿರ್ಮಾಣಗೊಂಡಿವೆ ಎಂದು ಸ್ಥಳೀಯರು ದೂರಿದ್ದಾರೆ.
ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಪ್ರವೇಶಿಸುವ ವಾಹನಗಳು ಹಾಗೂ ಸರ್ವಿಸ್ ರಸ್ತೆಯಿಂದ ಹೆದ್ದಾರಿಗೆ ಸೇರುವ ವಾಹನಗಳಿಗೆ ಅಗತ್ಯ ಸೂಚನಾ ಫಲಕಗಳು, ವೇಗ ನಿಯಂತ್ರಣ ವ್ಯವಸ್ಥೆಗಳು ಹಾಗೂ ಸುರಕ್ಷತಾ ಕ್ರಮಗಳ ಕೊರತೆಯಿಂದ ಅಪಘಾತಗಳು ಹೆಚ್ಚಾಗುತ್ತಿವೆ ಎನ್ನಲಾಗಿದೆ.
ಪಡುಮಾರ್ನಾಡು ಅಮನಬೆಟ್ಟು ಕ್ರಾಸ್ ಹಾಗೂ ಬನ್ನಡ್ಕ ದೇವಸ್ಥಾನ ಬಳಿಯ ಸಂಪರ್ಕ ರಸ್ತೆಗಳು ಅಸಮರ್ಪಕವಾಗಿರುವುದರಿಂದ ವಾಹನ ಸವಾರರು ಗೊಂದಲಕ್ಕೀಡಾಗುತ್ತಿದ್ದಾರೆ. ವೇಗವಾಗಿ ಸಂಚರಿಸುವ ವಾಹನಗಳು ತಿರುವು ಪಡೆಯುವ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಿರುವ ಘಟನೆಗಳು ನಿರಂತರವಾಗಿ ವರದಿಯಾಗುತ್ತಿವೆ.
“ಅವೈಜ್ಞಾನಿಕ ಕಾಮಗಾರಿ” – ಸಾರ್ವಜನಿಕರ ಆಕ್ರೋಶ
ಮಂಗಳೂರುದಿಂದ ಕಾರ್ಕಳವರೆಗೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವೈಜ್ಞಾನಿಕ ರೀತಿಯಲ್ಲಿ ನಡೆಯುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಮಗಾರಿ ಆರಂಭವಾದ ದಿನದಿಂದಲೇ ಸರಣಿ ಅಪಘಾತಗಳು ಸಂಭವಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗಂಭೀರ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಅಪಘಾತಗಳ ಸಂಖ್ಯೆ ಹೆಚ್ಚಾದರೂ ಅಧಿಕಾರಿಗಳಿಂದ ನಿರ್ಲಕ್ಷ್ಯ ಧೋರಣೆ ಮುಂದುವರಿದಿದೆ ಎಂದು ಸ್ಥಳೀಯರು ದೂರಿದ್ದಾರೆ.
ಹಳೆಯ ಯೋಜನೆಯೇ ಸಮಸ್ಯೆಗೆ ಮೂಲವೇ? ಕೆಲವು ಖಾಸಗಿ ಜಾಗಗಳನ್ನು ಉಳಿಸುವ ಉದ್ದೇಶದಿಂದ ಹೆದ್ದಾರಿಯನ್ನು ತಿರುವು-ಮುರುವುಗಳಿಂದ ನಿರ್ಮಿಸಲಾಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ದಶಕಗಳ ಹಿಂದಿನ ಹಳೆಯ ಯೋಜನಾ ನಕ್ಷೆಯನ್ನು ಆಧರಿಸಿ ಕಾಮಗಾರಿ ನಡೆಸುತ್ತಿರುವುದೇ ಇಂದಿನ ಸಮಸ್ಯೆಗಳಿಗೆ ಪ್ರಮುಖ ಕಾರಣ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೂ ಸಮರ್ಪಕ ಉತ್ತರ ಸಿಗುತ್ತಿಲ್ಲ ಎಂಬ ಅಸಮಾಧಾನ ಸ್ಥಳೀಯರಲ್ಲಿ ವ್ಯಕ್ತವಾಗಿದೆ.
ಅಪಾಯಕಾರಿಯಾದ ತಿರುವುಗಳು, ಗುಣಮಟ್ಟದ ಮೇಲೂ ಪ್ರಶ್ನೆ ಹೆದ್ದಾರಿಯ ಕೆಲ ಮೇಲ್ಸೇತುವೆಗಳಲ್ಲಿ ತೀಕ್ಷ್ಣ ಹಾಗೂ ಅಪಾಯಕಾರಿಯಾದ ತಿರುವುಗಳಿದ್ದು, ವಾಹನ ಸವಾರರಿಗೆ ನಿರಂತರ ಅಪಾಯ ಉಂಟುಮಾಡುತ್ತಿದೆ. ವೇಗವಾಗಿ ಸಾಗುವ ವಾಹನಗಳು ನಿಯಂತ್ರಣ ತಪ್ಪಿದರೆ ಮೇಲ್ಸೇತುವೆಯಿಂದ ಕೆಳಕ್ಕೆ ಬೀಳುವ ಸಾಧ್ಯತೆಯೂ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಹೆದ್ದಾರಿಯ ಎರಡೂ ಬದಿಗಳಲ್ಲಿ ನಿರ್ಮಿಸಿರುವ ಚರಂಡಿಗಳಲ್ಲಿ ಮಳೆ ನೀರು ಸರಿಯಾಗಿ ಹರಿಯದಿರುವುದು ಕಾಮಗಾರಿಯ ಗುಣಮಟ್ಟದ ಮೇಲೂ ಪ್ರಶ್ನೆ ಎಬ್ಬಿಸಿದೆ.
ಸಾಮಾಜಿಕ ಹೋರಾಟಗಾರರ ಆಕ್ರೋಶ “ಮಂಗಳೂರು ಮತ್ತು ಕಾರ್ಕಳ ನಡುವಿನ ಸಂಪರ್ಕದ ಜೀವನಾಡಿಯಾಗಬೇಕಿದ್ದ ರಾಷ್ಟ್ರೀಯ ಹೆದ್ದಾರಿ ಇಂದು ಆತಂಕದ ಕಾರಿಡಾರ್ ಆಗಿದೆ. ಕಾಮಗಾರಿ ಮುಂದುವರಿದಂತೆ ಸರಣಿ ಮಾರಣಾಂತಿಕ ಅಪಘಾತಗಳು ನಡೆಯುತ್ತಿವೆ. ಇದು ಅವೈಜ್ಞಾನಿಕ ಮತ್ತು ಪ್ರಾಣಾಪಾಯಕರ ಯೋಜನೆ.” — ನಿತಿನ್ ಬೆಳುವಾಯಿ, ಸಾಮಾಜಿಕ ಹೋರಾಟಗಾರ
“ಅಧಿಕಾರಿಗಳು ಈ ಸಾವುಗಳನ್ನು ಕೇವಲ ಅಂಕಿಅಂಶಗಳಾಗಿ ನೋಡದೇ, ಯೋಜನೆಯಲ್ಲಿನ ದೋಷಗಳನ್ನು ತಕ್ಷಣ ಸರಿಪಡಿಸಬೇಕು. ಇಲ್ಲವಾದರೆ ಮಂಗಳೂರು–ಕಾರ್ಕಳ ಹೆದ್ದಾರಿ ಸಾರ್ವಜನಿಕ ನಿರ್ಲಕ್ಷ್ಯದ ಸಂಕೇತವಾಗಿಯೇ ಉಳಿಯಲಿದೆ.” — ಪ್ರಸನ್ನ ಶೆಟ್ಟಿ, ಸ್ಥಳೀಯರು
ಸಾರ್ವಜನಿಕರ ಆಗ್ರಹ
- ಅಪಘಾತ ಪ್ರದೇಶಗಳಲ್ಲಿ ತಕ್ಷಣ ಸುರಕ್ಷತಾ ಕ್ರಮ
- ಸ್ಪಷ್ಟ ಸೂಚನಾ ಫಲಕಗಳ ಅಳವಡಿಕೆ
- ವೇಗ ನಿಯಂತ್ರಣ ವ್ಯವಸ್ಥೆ ಜಾರಿ
- ಅಪಾಯಕಾರಿ ಡೈವರ್ಷನ್‌ಗಳ ಮರು ವಿನ್ಯಾಸ
- ಕಾಮಗಾರಿಯ ಗುಣಮಟ್ಟ ಪರಿಶೀಲನೆ ಸ್ಥಳೀಯರು ಹಾಗೂ ವಾಹನ ಸವಾರರು ಹೆದ್ದಾರಿ ಕಾಮಗಾರಿಯನ್ನು ತಕ್ಷಣ ವೈಜ್ಞಾನಿಕವಾಗಿ ಮರುಪರಿಶೀಲಿಸಿ, ಜೀವಹಾನಿ ತಪ್ಪಿಸುವ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ವಿಶೇಷ ವರದಿ: ಯಶೋಧರ ವಿ.ಬಂಗೇರ