ಮೂಡುಬಿದಿರೆ: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಪಕ್ಷಿಕೆರೆ ಶಾಖೆಯ ದ್ವಿತೀಯ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ಸಾಮಾನ್ಯ ವೈದ್ಯಕೀಯ, ನೇತ್ರ ತಪಾಸಣೆ ಹಾಗೂ ದಂತ ಚಿಕಿತ್ಸಾ ಶಿಬಿರವು ಪಕ್ಷಿಕೆರೆಯ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಮಂಗಳೂರಿನ ಕೆ. ಎಂ. ಸಿ ಆಸ್ಪತ್ರೆ ಅತ್ತಾವರ ಹಾಗೂ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ಇವರ ನುರಿತ ವೈದ್ಯರ ತಂಡ ಈ ಶಿಬಿರದಲ್ಲಿ ಪಾಲ್ಗೊಂಡಿತ್ತು.
ವಿನಾಯಕ ಮಿತ್ರ ಮಂಡಳಿಯ ಗೌರವಾಧ್ಯಕ್ಷ ಧನಂಜಯ ಶೆಟ್ಟಿಗಾರ್ ಶಿಬಿರ ಉದ್ಘಾಟಿಸಿ ಮಾತನಾಡಿ, "ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮತೋಲನದಲ್ಲಿದ್ದರೆ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಆತ್ಮಶಕ್ತಿ ಸಹಕಾರಿ ಸಂಘವು ವಿವಿಧ ಸಂಸ್ಥೆಗಳೊಂದಿಗೆ ಸೇರಿ ಜನಪದ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ," ಎಂದು ಶುಭ ಹಾರೈಸಿದರು.
ಕೆ.ಎಂ.ಸಿ ಆಸ್ಪತ್ರೆಯ ಡಾ. ರಮ್ಯ ಶೆಣೈ ಮಾತನಾಡಿ, ಶಿಬಿರದಲ್ಲಿ ಲಭ್ಯವಿರುವ ಸೇವೆಗಳ ಬಗ್ಗೆ ಮಾಹಿತಿ ನೀಡಿದರು ಹಾಗೂ ಸಾರ್ವಜನಿಕರು ಇಂತಹ ಅವಕಾಶಗಳನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಮಾತನಾಡಿ, "ಸಂಘವು ಕಳೆದ 14 ವರ್ಷಗಳಿಂದ ನಿರಂತರವಾಗಿ ಆರೋಗ್ಯ ಶಿಬಿರಗಳನ್ನು ನಡೆಸುತ್ತಾ ಬಂದಿದೆ. ಇದು ಸಂಘದ 108ನೇ ಉಚಿತ ವೈದ್ಯಕೀಯ ಶಿಬಿರವಾಗಿದೆ. ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಸಿಗಲಿ ಎಂಬ ಉದ್ದೇಶದಿಂದ ರಜಾ ದಿನದಂದು ಈ ಶಿಬಿರ ಆಯೋಜಿಸಲಾಗಿದೆ," ಎಂದರು.
ಈ ಸಂದರ್ಭದಲ್ಲಿ ಸಂಘದ ನಿರ್ದೇಶಕ ರಮಾನಾಥ ಸನಿಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ನವೀನ್ ಕುಮಾರ್, ವಿನಾಯಕ ಮಿತ್ರ ಮಂಡಳಿಯ ಅಧ್ಯಕ್ಷ ಧನರಾಜ್ ಅಂಚನ್, ವಿನಾಯಕ ಮಹಿಳಾ ಮಂಡಳಿಯ ಅಧ್ಯಕ್ಷೆ ಧನಲಕ್ಷ್ಮಿ ಶೆಟ್ಟಿಗಾರ್, ಹರಿಪಾದ ಜಾರಂದಾಯ ಯುವಕ ಮಂಡಲದ ಉಪಾಧ್ಯಕ್ಷ ಯಾದವ ಸಾಲ್ಯಾನ್, ಕೋರ್ದಬ್ಬು ದೈವಸ್ಥಾನದ ಗುರಿಕಾರ ಸತೀಶ್ ಸಿ ಅಮೀನ್, ಸೇವಾ ಸಮಿತಿಯ ಅಧ್ಯಕ್ಷ ರಮಾನಾಥ್, ಕಟ್ಟಡ ಮಾಲೀಕ ಶೀನ ಕೋಟ್ಯಾನ್, ಕೆ.ಎಂ.ಸಿ ಆಸ್ಪತ್ರೆಯ ಹರ್ಬರ್ಟ್ ಮರಿಯೊ, ಎನ್.ಜಿ. ವರ್ಲ್ಡ್ ಚಾರಿಟೇಬಲ್ ಟ್ರಸ್ಟ್‌ನ ಲಿಲ್ಲಿ ಮೇರಿ ಉಪಸ್ಥಿತರಿದ್ದರು.
ಎನ್.ಜಿ ವರ್ಲ್ಡ್ ಚಾರಿಟೇಬಲ್ ಟ್ರಸ್ಟ್ ಹಾಗೂ ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ಜಂಟಿ ಸಹಯೋಗದೊಂದಿಗೆ ನಡೆದ ಈ ಶಿಬಿರದಲ್ಲಿ ಸುಮಾರು 150ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪ್ರಯೋಜನ ಪಡೆದರು. ಕೃಷ್ಣಾಪುರ ಶಾಖಾಧಿಕಾರಿ ಸುಜಾತ ಸ್ವಾಗತಿಸಿದರು. ಬಜಪೆ ಶಾಖಾಧಿಕಾರಿ ಹರ್ಷಿತಾ ವಂದಿಸಿದರು. ಪಕ್ಷಿಕೆರೆ ಶಾಖಾಧಿಕಾರಿ ರಮ್ಯ ಕಾರ್ಯಕ್ರಮ ನಿರೂಪಿಸಿದರು.