ಬಂಟ್ವಾಳ:ತಾಲೂಕಿನ ಮಣಿನಾಲ್ಕೂರು ಗ್ರಾಮದ ಇಳಿಯೂರು ಮಹಾವಿಷ್ಣು ದೇವಸ್ಥಾನದ ಗರ್ಭಗುಡಿಯ ಪ್ರಾಕಾರಕ್ಕೆ ಶನಿವಾರ ಸಂಜೆ ಸುರಿದ ಭಾರೀ ಗಾಳಿ-ಮಳೆಯ ಜೊತೆಗಿನ ಸಿಡಿಲು ನೇರವಾಗಿ ಬಡಿದು ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ.
ಸಂಜೆ ಸುಮಾರು 4.30 ರ ವೇಳೆಗೆ ಸಂಭವಿಸಿದ ಈ ಘಟನೆಯ ತೀವ್ರತೆಗೆ ಗರ್ಭಗುಡಿಯ ಮೇಲ್ಭಾಗದ ಪ್ರಾಕಾರದ ಶಿಲಾ ಕಂಬಗಳು ಮತ್ತು ಮೇಲ್ಛಾವಣಿಯ ಕಲ್ಲುಗಳು ಸಂಪೂರ್ಣವಾಗಿ ಛಿದ್ರಗೊಂಡು ನೆಲಕ್ಕಪ್ಪಳಿಸಿವೆ. ಕಲ್ಲಿನ ಕಂಬಗಳು ಬಿರುಕು ಬಿಟ್ಟು ಕುಸಿದಿದ್ದು, ಮೇಲ್ಛಾವಣಿಯ ಮರದ ತೊಲೆಗಳು ಹೊರಗಾಣಿಸುವಂತೆ ಹಾನಿಯಾಗಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ ಸುಮಾರು 1 ಕೋಟಿ ರೂಪಾಯಿಗೂ ಅಧಿಕ ನಷ್ಟ ಉಂಟಾಗಿದೆ. ನಾಲ್ಕು ವರ್ಷಗಳ ಹಿಂದೆಯಷ್ಟೇ ಈ ದೇವಸ್ಥಾನವನ್ನು ಸಂಪೂರ್ಣವಾಗಿ ನವೀಕರಿಸಿ ಬ್ರಹ್ಮಕಲಶೋತ್ಸವ ನಡೆಸಲಾಗಿತ್ತು. ಇದೀಗ ಮತ್ತೆ ಗರ್ಭಗುಡಿಗೆ ಅಪಾರ ಹಾನಿಯಾಗಿದ್ದು, ಪುನರ್ ನವೀಕರಣಕ್ಕೆ ಭಾರಿ ಮೊತ್ತದ ವೆಚ್ಚ ತಗಲಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ತಾಲೂಕಿನ ಪ್ರಸಿದ್ಧ ಕಾರಿಂಜ ಕಾರಿಂಜೇಶ್ವರ ದೇವಸ್ಥಾನಕ್ಕೂ ಸಿಡಿಲು ಅಪ್ಪಳಿಸಿದೆ. ಘಟನೆಯ ಸಮಯದಲ್ಲಿ ದೇವಸ್ಥಾನದ ಆವರಣದಲ್ಲಿ ಯಾರೂ ಇಲ್ಲದ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹಾನಿಯ ನಿಖರ ವಿವರಗಳ ಕುರಿತು ದೇವಸ್ಥಾನ ಆಡಳಿತ ಮಂಡಳಿ ಪರಿಶೀಲನೆ ನಡೆಸುತ್ತಿದೆ.
ಸಿಡಿಲಾಘಾತ: ನಾಲ್ಕು ವರ್ಷಗಳ ಹಿಂದಷ್ಟೇ ನವೀಕರಣಗೊಂಡಿದ್ದ ಮಹಾವಿಷ್ಣು ದೇವಸ್ಥಾನಕ್ಕೆ ಹಾನಿ-ಅಪಾರ ರೂ.ನಷ್ಟ
ಸಿಡಿಲಾಘಾತ: ನಾಲ್ಕು ವರ್ಷಗಳ ಹಿಂದಷ್ಟೇ ನವೀಕರಣಗೊಂಡಿದ್ದ ಮಹಾವಿಷ್ಣು ದೇವಸ್ಥಾನಕ್ಕೆ ಹಾನಿ-ಅಪಾರ ರೂ.ನಷ್ಟ