ಮೂಡುಬಿದಿರೆ: ನ್ಯಾಯಾಲಯಕ್ಕೆ ವಂಚಿಸಿ ತಲೆಮರೆಸಿಕೊಂಡಿದ್ದ ಬಾಕಿ ವಾರೆಂಟ್ ಆರೋಪಿಯ 8 ಜಾಮೀನು ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ.

ಪ್ರಕರಣದಲ್ಲಿ ಆರೋಪಿಯಾದ ಕೆ. ಅಬ್ದುಲ್ ಬಶೀರ್ @ ಅಬ್ದುಲ್ ಬಶೀರ್ ಮಾನ್ಯ ಮೂಡುಬಿದಿರೆ ನ್ಯಾಯಾಲಯ ಹಾಗೂ ಇತರ ನ್ಯಾಯಾಲಯಗಳಲ್ಲಿ ಸುಮಾರು 17 ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ತನಿಖೆ ವೇಳೆ ಜಾಮೀನು ಪಡೆದು ಬಿಡುಗಡೆಯಾದ ಬಳಿಕ, ನ್ಯಾಯಾಲಯ ನೀಡಿದ ಆದೇಶಗಳನ್ನು ಹಾಗೂ ನ್ಯಾಯಾಲಯದ ಮುಂದೆ ಹಾಜರಾಗಬೇಕಾದ ದಿನಾಂಕಗಳನ್ನು ಉಲ್ಲಂಘಿಸಿದ್ದನು. ನೀಡಿದ ಜಾಮೀನು ಮುಚ್ಚಳಿಕೆಯನ್ನು ದುರುಪಯೋಗಪಡಿಸಿಕೊಂಡು, ತನಿಖೆಗೆ ಹಾಜರಾಗದೆ ನ್ಯಾಯಾಲಯಕ್ಕೆ ವಂಚಿಸಿ ತಲೆಮರೆಸಿಕೊಂಡಿದ್ದನು. ಮಾನ್ಯ ನ್ಯಾಯಾಲಯದಿಂದ ಹೊರಡಿಸಿದ ವಾರೆಂಟ್ ಹಾಗೂ ಜಪ್ತಿ ಪ್ರಕ್ರಿಯೆಗಳ ಆದೇಶಗಳಿಗೂ ಸಿಗದೆ, ಸುಮಾರು 4 ವರ್ಷಗಳಿಂದ ಉದ್ದೇಶಪೂರ್ವಕವಾಗಿ ತಲೆಮರೆಸಿಕೊಂಡಿದ್ದನು.

ಈತನು ಉಡುಪಿಯಲ್ಲಿ ಇರುವ ಬಗ್ಗೆ ಬಂಟ್ವಾಳ ತಾಲೂಕಿನ ವಿ.ಸಿ ಡಿಸೋಜ ಅವರಿಗೆ ಸಿಕ್ಕ ಖಚಿತ ಮಾಹಿತಿಯಂತೆ, 18-04-2026 ರಂದು 19.30 ಗಂಟೆಗೆ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆರೋಪಿ ಒಟ್ಟು 8 ಪ್ರಕರಣಗಳಲ್ಲಿ ಜಾಮೀನು ಅರ್ಜಿಗಳನ್ನು ಸಲ್ಲಿಸಿದ್ದು, ಅಭಿಯೋಜನಾ ಪರವಾಗಿ ಈ ಅರ್ಜಿಗಳಿಗೆ ವಿವರವಾದ ತಡೆಯಾಕ್ಷೇಪಣೆಗಳನ್ನು ಮಂಡಿಸಿ ತೀವ್ರ ವಿರೋಧ ವ್ಯಕ್ತಪಡಿಸಲಾಯಿತು. ಮಾನ್ಯ ಅಭಿಯೋಜಕರು ಮಂಡಿಸಿದ ವಾದ ಸರಣಿಯ ಅಂಶಗಳನ್ನು ಪರಿಗಣಿಸಿ, ಆರೋಪಿಯು ವಂಚನೆ ಮಾಡುತ್ತಿರುವ ವಿಧಾನ, ದೀರ್ಘಕಾಲ ತಲೆಮರೆಸಿಕೊಂಡಿರುವುದು, ಆತನ ಹಿನ್ನೆಲೆ ಮತ್ತು ಮಂಗಳೂರು ಕಡೆಗಳಲ್ಲಿ ಆತನ ವಿರುದ್ಧ ದಾಖಲಾಗಿರುವ ಪ್ರಕರಣಗಳ ವಿವರಗಳನ್ನು ಮನಗಂಡು, ವಾದ ವಿವಾದ ಆಲಿಸಿದ ಪ್ರಧಾನ ಸಿವಿಲ್ ಜಡ್ಜ್ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಚಂದನ ಬಿ.ಟಿ. ಜಾಮೀನು ಅರ್ಜಿಗಳನ್ನು ವಜಾಗೊಳಿಸಿ ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ಶ್ರೀಲತಾ ಪ್ರಸಾದ್ ವಾದ ಮಂಡಿಸಿದರು.