ಮೂಡುಬಿದಿರೆ: ಗ್ರಾಮಗಳ ಬಳಿಕ ಇದೀಗ ಸಣ್ಣ ಪಟ್ಟಣಗಳ ವೈವಿಧ್ಯತೆ ಮತ್ತು ಪರಂಪರೆಯನ್ನು ದಾಖಲಿಸಿಕೊಂಡು ಕಾಪಿಡಬೇಕಾದ ಅನಿವಾರ್ಯತೆಯಿದೆ ಎಂದು ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್) ಮಂಗಳೂರು ಘಟಕದ ಸಂಚಾಲಕ ಸುಭಾಶ್ಚಂದ್ರ ಬಸು ಹೇಳಿದರು. ರೋಟರಿ ಕ್ಲಬ್ ಮೂಡುಬಿದಿರೆ ಸಹಯೋಗದಲ್ಲಿ ಸಮ್ಮಿಲನ್ ಸಭಾಂಗಣದಲ್ಲಿ ಸೋಮವಾರ ಸಂಜೆ ಇಂಟಾಕ್ ರೂಪಿಸಿದ ಮೂಡುಬಿದಿರೆ ಹೆರಿಟೇಜ್ ಮ್ಯಾಪ್ ಹಾಗೂ 'ಟ್ರೆಡಿಶನಲ್ ವಾಟರ್ ಸಿಸ್ಟಮ್ಸ್ ಆಫ್ ಮೂಡುಬಿದಿರೆ' ಕೃತಿಯ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಅಭಿವೃದ್ಧಿಯ ಹೆಸರಿನಲ್ಲಿ ಜಲಮೂಲಗಳು ಕಲುಷಿತಗೊಳ್ಳುತ್ತಿದ್ದು, ಇದು ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆಯಾಗಲಿರುವುದರಿಂದ ನಮ್ಮೆಲ್ಲರಿಗೂ ಪ್ರಸ್ತುತ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ಅವರು ತಿಳಿಸಿದರು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರಿನ ಬಳಿಕ ಎರಡನೆಯದಾಗಿ ಮೂಡುಬಿದಿರೆಯ ಹೆರಿಟೇಜ್ ಮ್ಯಾಪ್ ರೂಪಿಸಲಾಗಿದ್ದು, ಶೀಘ್ರದಲ್ಲೇ ಕಾರ್ಕಳದ ಹೆರಿಟೇಜ್ ಮ್ಯಾಪ್ ಬಿಡುಗಡೆಗೂ ಸಿದ್ಧತೆ ನಡೆದಿದೆ ಎಂದು ಸುಭಾಶ್ಚಂದ್ರ ಬಸು ಮಾಹಿತಿ ನೀಡಿದರು. ಊರಿನ ಸಾಂಸ್ಕೃತಿಕ ಹಾಗೂ ಪಾರಂಪರಿಕ ವಿಶೇಷತೆಗಳ ದಾಖಲೀಕರಣ, ಕೃತಿ ಪ್ರಕಟಣೆ ಮತ್ತು ಅಧ್ಯಯನ ಕಾರ್ಯದಲ್ಲಿ ತೊಡಗಿರುವ ಸಂಸ್ಥೆಗೆ ಸ್ವಯಂಸೇವಕರು, ಸದಸ್ಯರು, ಸಂಪನ್ಮೂಲ ವ್ಯಕ್ತಿಗಳಾಗಿ ಹಾಗೂ ಆರ್ಥಿಕವಾಗಿಯೂ ಸ್ಪಂದಿಸುವವರ ಅಗತ್ಯವಿದೆ ಎಂದು ಅವರು ಹೇಳಿದರು.
ರೋಟರಿ ಅಧ್ಯಕ್ಷ ನಾಗರಾಜ್ ಹೆಗ್ಡೆ ಹೆರಿಟೇಜ್ ಮ್ಯಾಪ್ ಹಾಗೂ ಕೃತಿಯ ಲೋಕಾರ್ಪಣೆ ನೆರವೇರಿಸಿ, ಊರಿನ ಪಾರಂಪರಿಕ ವಿಶೇಷತೆ ಮತ್ತು ಅಗತ್ಯತೆಯ ಕುರಿತು ಕೃತಿ ಹಾಗೂ ಅಧ್ಯಯನ ವರದಿಗಳನ್ನು ಕಟ್ಟಿಕೊಟ್ಟಿರುವ ಸಂಸ್ಥೆಗೆ ಜನತೆಯ ಪರವಾಗಿ ಕೃತಜ್ಞತೆ ಅರ್ಪಿಸಿದರು. ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ. ಪುಂಡಿಕಾಯ್ ಗಣಪಯ್ಯ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ದೆಹಲಿ ಮೂಲದ ಸರಕಾರೇತರ ಸಂಸ್ಥೆಯಾಗಿರುವ ಇಂಟಾಕ್ ಭಾರತೀಯ ಪರಂಪರೆಯ ಕುರಿತು ಜನರಿಗೆ ಅರಿವು, ಜಾಗೃತಿ ಮತ್ತು ರಕ್ಷಣೆಯ ಕಾರ್ಯದಲ್ಲಿ 230ಕ್ಕೂ ಹೆಚ್ಚು ಶಾಖೆಗಳ ಮೂಲಕ ಸಕ್ರಿಯವಾಗಿದೆ ಎಂದರು. ಮಂಗಳೂರಿನಲ್ಲಿ ಕಳೆದ ಹತ್ತು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಇಂಟಾಕ್, ಇದೀಗ ಮೂಡುಬಿದಿರೆಯ ಪಾರಂಪರಿಕ ತಾಣಗಳು ಮತ್ತು ಜಲಮೂಲಗಳ ಕುರಿತ ಅಧ್ಯಯನ ವರದಿಯ ಜೊತೆಗೆ ವಿಶೇಷವಾಗಿ ಗೌರೀಕೆರೆಯ ಮಹತ್ವ ಹಾಗೂ ಅಭಿವೃದ್ಧಿ ಸಾಧ್ಯತೆಗಳ ಕುರಿತು ತಯಾರಿಸಿರುವ ವರದಿಗಳು ಉಪಯುಕ್ತ ಕೊಡುಗೆಗಳಾಗಿವೆ ಎಂದು ಅವರು ಶ್ಲಾಘಿಸಿದರು. ರೋಟರಿ ವತಿಯಿಂದ ಸುಭಾಶ್ಚಂದ್ರ ಬಸು ಅವರನ್ನು ಗೌರವಿಸಲಾಯಿತು. ರೋಟರಿ ಚ್ಯಾರಿಟೇಬಲ್ ಟ್ರಸ್ಟ್ ಸಹಕಾರದೊಂದಿಗೆ ಜರುಗಿದ ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಪಿ.ಕೆ. ಥೋಮಸ್, ರೋಟರಿ ಕಾರ್ಯದರ್ಶಿ ಪವನ್ ಪೈ, ಇಂಟಾಕ್ ಬಳಗದ ಶರ್ವಾಣಿ ಭಟ್, ಮುರಳಿ, ನೇಮಿರಾಜ್ ಶೆಟ್ಟಿ, ರಾಜೇಂದ್ರ ಕೇದಿಗೆ, ಹರೀಶ್ ಕೊಡಿಯಲ್ ಬೈಲು, ರೇಷ್ಮಾ ಶೆಟ್ಟಿ ಉಪಸ್ಥಿತರಿದ್ದರು. ರೋಟರಿ ಕಾರ್ಯದರ್ಶಿ ಪವನ್ ಪೈ ವಂದಿಸಿದರು.