ಮೂಡುಬಿದಿರೆ: ಸರಕಾರಿ ಶಾಲೆಗಳಲ್ಲಿ ಸಿಗುವ ಆಧುನಿಕ ಸವಲತ್ತು ಹಾಗೂ ದ್ವಿಭಾಷಾ ಬೋಧನೆಯನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿರುಪಾಕ್ಷ ಎಚ್.ಎಸ್ ಕರೆ ನೀಡಿದ್ದಾರೆ.
ಅವರು 2026-27ನೇ ಸಾಲಿನ ಶಾಲಾ ದಾಖಲಾತಿ ಆಂದೋಲನದ ಅಂಗವಾಗಿ ಮಂಗಳವಾರ ಕಲ್ಲಬೆಟ್ಟುವಿನ ಪಿ.ಎಂ.ಶ್ರೀ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮೂಡುಬಿದಿರೆ ವ್ಯಾಪ್ತಿಯಲ್ಲಿ ಎರಡು ಪಿ.ಎಂ.ಶ್ರೀ ಶಾಲೆಗಳಿದ್ದು, ಕೇಂದ್ರ ಸರಕಾರದ ಸಂಯೋಜನೆಯಲ್ಲಿ ಸಿಗುವ ಅನೇಕ ಸವಲತ್ತುಗಳು ವಿದ್ಯಾರ್ಥಿಗಳಿಗೆ ತಲುಪುತ್ತಿವೆ. ಪ್ರಸಕ್ತ ಸಾಲಿನಿಂದ ಸರಕಾರಿ ಶಾಲೆಗಳಲ್ಲಿ ದ್ವಿಭಾಷೆಗಳಲ್ಲಿ ಬೋಧನೆ ನಡೆಯಲಿದ್ದು, ಪೋಷಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿ ಇದರ ಪ್ರಯೋಜನ ಪಡೆಯಬೇಕು ಎಂದು ಅವರು ತಿಳಿಸಿದರು.
ದಾಖಲಾತಿ ಆಂದೋಲನದ ಅಂಗವಾಗಿ ಕಲ್ಲಬೆಟ್ಟು ಸುತ್ತಮುತ್ತಲಿನ ಪರಿಸರದಲ್ಲಿ ಶಾಲಾ ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗುತ್ತಾ ಜಾಥಾ ನಡೆಸಿ, ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಲು ಸಾರ್ವಜನಿಕರನ್ನು ಪ್ರೇರೇಪಿಸಿದರು. ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕಿ ಸ್ಮಿತಾ ಮಿರಾಂದ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಶಾಲಾ ಶಿಕ್ಷಕವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಜೆಸಿಂತಾ ಸ್ವಾಗತಿಸಿದರು. ಅನಿತಾ ಸಿಕ್ವೇರಾ ವಂದಿಸಿದರು.