ಮೂಡುಬಿದಿರೆ: ಮಂಗಳೂರು - ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169 ಹಾದು ಹೋಗುವ ಬನ್ನಡ್ಕ ಎಂಬಲ್ಲಿ ಅಪಘಾತ ವಲಯವೆಂದು ಕುಖ್ಯಾತಿ ಪಡೆದಿದ್ದ ಪರಿಸರದಲ್ಲಿ ರಸ್ತೆ ಎತ್ತರಿಸುವ ಕಾಮಗಾರಿ ಬುಧವಾರ ಪ್ರಾರಂಭಗೊಂಡಿದೆ.
ಈ ಪರಿಸರದಲ್ಲಿ ಹೆದ್ದಾರಿ ಏರಿಳಿತದಿಂದ ಕೂಡಿರುವುದು ಮತ್ತು ಸರ್ವಿಸ್ ರಸ್ತೆ ಇಲ್ಲದಿರುವುದರಿಂದ ನಿರಂತರ ಅಪಘಾತವಾಗಿ ಹಲವು ಮಂದಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಕೆಲ ದಿನಗಳ ಹಿಂದೆ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಮತ್ತು ಗುತ್ತಿಗೆದಾರ ಕಂಪನಿಯ ಇಂಜಿನಿಯರ್‌ಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ್ದರು. ಈ ವೇಳೆ ಸ್ಥಳೀಯರು ಬನ್ನಡ್ಕ ಪರಿಸರದಲ್ಲಿ ಹೆದ್ದಾರಿಯ ಎರಡೂ ಬದಿ ಸರ್ವಿಸ್ ರಸ್ತೆ ನಿರ್ಮಿಸಬೇಕು ಹಾಗೂ ಅಮನಬೆಟ್ಟು ರಸ್ತೆಯು ಹೆದ್ದಾರಿಯನ್ನು ಸಂಧಿಸುವಲ್ಲಿ ರಸ್ತೆಯು ತೀರಾ ಕೆಳಮಟ್ಟದಲ್ಲಿದ್ದು ಹೆದ್ದಾರಿ ಪ್ರವೇಶಿಸುವ ವಾಹನಗಳಿಗೆ ಹೆದ್ದಾರಿ ಗೋಚರವಾಗದಿರುವುದರಿಂದ ಅಪಘಾತವಾಗುತ್ತಿರುವ ಬಗ್ಗೆ ಗಮನ ಸೆಳೆದಿದ್ದರು. ತಕ್ಷಣವೇ ಸ್ಥಳೀಯರ ಬೇಡಿಕೆಯನ್ನು ಈಡೇರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದ ಶಾಸಕರು, ಮೇ 20 ರೊಳಗೆ ಕಾಮಗಾರಿ ನಡೆಸದಿದ್ದರೆ ಪ್ರತಿಭಟಿಸುವುದಾಗಿಯೂ ಎಚ್ಚರಿಸಿದ್ದರು. ಸ್ಥಳೀಯರು ಗಡುವು ನೀಡಿದ ಕೊನೆಯ ದಿನವಾದ ಬುಧವಾರ ಕಾಮಗಾರಿ ಪ್ರಾರಂಭಗೊಂಡಿದೆ.