ಮೂಡುಬಿದಿರೆ: ತಾಲೂಕು ಕಿಸಾನ್ ಪ್ರಮುಖರ ಸಭೆಯು ಫ್ಯಾಮಿಲಿ ಸಭಾಂಗಣದಲ್ಲಿ ವಕೀಲ, ಮುಖಂಡ ಶಾಂತಿಪ್ರಸಾದ್ ಹೆಗ್ಡೆ ನೇತೃತ್ವದಲ್ಲಿ ಜರಗಿತು. ಸರ್ಕಾರವು ಹಾಲಿನ ಪ್ರೋತ್ಸಾಹಧನವನ್ನು ಹಲವು ತಿಂಗಳುಗಳಿಂದ ನೀಡದೆ ಬಾಕಿ ಇಟ್ಟಿರುವುದನ್ನು ಸಭೆಯಲ್ಲಿ ತೀವ್ರವಾಗಿ ಖಂಡಿಸಲಾಯಿತು. ಅಕ್ರಮ ಸಕ್ರಮದ ಅರ್ಜಿಗಳನ್ನು ಬಗರ್ ಹುಕುಂ ಸಮಿತಿಯ ಮುಂದೆ ಮಂಡಿಸದೆ ಏಕಪಕ್ಷೀಯವಾಗಿ ವಜಾಗೊಳಿಸುತ್ತಿರುವ ನೀತಿಯ ವಿರುದ್ಧವೂ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ‘ನಮ್ಮ ಭೂಮಿ ನಮ್ಮ ಹಕ್ಕು’ ಎಂಬ ಧ್ಯೇಯವಾಕ್ಯದೊಂದಿಗೆ ತಾಲೂಕಿನಲ್ಲಿ ಇದೇ ತಿಂಗಳಲ್ಲಿ ಬೃಹತ್ ಹೋರಾಟವನ್ನು ನಡೆಸಲು ಸಭೆಯಲ್ಲಿ ಸರ್ವಾನುಮತಿಯಿಂದ ತೀರ್ಮಾನಿಸಲಾಯಿತು. ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ ವಿಜೇತರಾದ ನಿಡ್ಡೋಡಿ ಗ್ರಾಮ ಸಮಿತಿ ಅಧ್ಯಕ್ಷ ಸುಧಾಕರ್ ಪೂಜಾರಿ, ಕಿಸಾನ್ ಪ್ರಮುಖರಾದ ಕೇಶವ ಪೂಜಾರಿ, ಮಾರುತಿ ಭಟ್ ಮತ್ತು ವಸಂತ ಭಟ್ ಅಶ್ವತ್ಥಪುರ ಅವರನ್ನು ಕಿಸಾನ್ ಸಂಘಟನೆಯ ವತಿಯಿಂದ ಗೌರವಿಸಲಾಯಿತು. ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಭಂಡಾರಿ, ತಾಲೂಕು ಪ್ರಮುಖರಾದ ಜಾಯ್ಲೆಶ್ ಡಿಸೋಜ, ತಾಲೂಕು ಪ್ರಧಾನ ಕಾರ್ಯದರ್ಶಿ ವಸಂತ ಭಟ್ ಪಯ್ಯಾಡಿ ಹಾಗೂ ವಿವಿಧ ಗ್ರಾಮ ಸಮಿತಿಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಇತ್ತೀಚೆಗೆ ನಿಧನರಾದ ಕಡಂದಲೆ ಗ್ರಾಮದ ಕಿಸಾನ್ ಪ್ರಮುಖ ವಿಜಯ ಸಪಳಿಗ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಸಭೆಯಲ್ಲಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ರೈತರ ಬೃಹತ್ ಹೋರಾಟಕ್ಕೆ ಮೂಡುಬಿದಿರೆಯಲ್ಲಿ ಸಿದ್ಧತೆ: ಬಗರ್ ಹುಕುಂ ಅರ್ಜಿ ವಜಾ ನೀತಿ ವಿರೋಧಿಸಿ ‘ನಮ್ಮ ಭೂಮಿ ನಮ್ಮ ಹಕ್ಕು’ ಆಂದೋಲನಕ್ಕೆ ಚಾಲನೆ
ರೈತರ ಬೃಹತ್ ಹೋರಾಟಕ್ಕೆ ಮೂಡುಬಿದಿರೆಯಲ್ಲಿ ಸಿದ್ಧತೆ: ಬಗರ್ ಹುಕುಂ ಅರ್ಜಿ ವಜಾ ನೀತಿ ವಿರೋಧಿಸಿ ‘ನಮ್ಮ ಭೂಮಿ ನಮ್ಮ ಹಕ್ಕು’ ಆಂದೋಲನಕ್ಕೆ ಚಾಲನೆ