ಮೂಡುಬಿದಿರೆ: ಯುವವಾಹಿನಿ ಮೂಡುಬಿದಿರೆ ಘಟಕ ಹಾಗೂ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಸಂಯುಕ್ತ ಆಶ್ರಯದಲ್ಲಿ ಸೌರಶಕ್ತಿ ಆಧಾರಿತ ಜೀವನೋಪಾಯ ಯಂತ್ರಗಳು ಮತ್ತು ಬ್ಯಾಂಕ್ ಸಾಲ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮ ನಡೆಯಿತು.
ಸ್ವಉದ್ಯೋಗ, ಮಹಿಳಾ ಸಬಲೀಕರಣ, ಆರ್ಥಿಕ ಸ್ವಾವಲಂಬನೆ ಹಾಗೂ ನವೀಕರಿಸಬಹುದಾದ ಇಂಧನದ ಮಹತ್ವವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲದ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ತರಬೇತಿದಾರರನ್ನು ಸಿದ್ಧಗೊಳಿಸಿ, ಸಮಯಪಾಲನೆಯ ಮಹತ್ವವನ್ನು ಒತ್ತಿಹೇಳುವ ಮೂಲಕ ಕಾರ್ಯಕ್ರಮ ನಿರ್ವಹಿಸಿದರು.
ನವದೆಹಲಿಯ ಟ್ರೇಡ್ ಪ್ರಮೋಶನ್ ಕೌನ್ಸಿಲ್ ಆಫ್ ಇಂಡಿಯಾದ ಸೀನಿಯರ್ ಡೈರೆಕ್ಟರ್ ಪ್ರಕಾಶ್ ಶೆಟ್ಟಿ ಉಳೆಪಾಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂದಿನ ಯುಗದಲ್ಲಿ ಸ್ವಉದ್ಯೋಗದ ಅಗತ್ಯತೆ ಕುರಿತು ತಿಳಿಸಿದ ಅವರು, ತುಳಸಿ ಗಿಡವನ್ನು ಕೇವಲ ದೇವರಿಗೆ ಅರ್ಪಿಸುವ ಜೊತೆಗೆ ಅದೊಂದು ಔಷಧೀಯ ಗುಣ ಹೊಂದಿರುವ ಸಸ್ಯವಾಗಿದ್ದು, ಇದನ್ನು ವಾಣಿಜ್ಯ ಬೆಳೆಯನ್ನಾಗಿ ಮಾಡಲು ಸಾಧ್ಯ ಎಂದರು. ತಂತ್ರಜ್ಞಾನದ ಬಳಕೆ ಹಾಗೂ ಯುವಜನತೆ ತಮ್ಮ ಸಾಮರ್ಥ್ಯವನ್ನು ಗುರುತಿಸಿಕೊಂಡು ಉದ್ಯಮಶೀಲತೆಯತ್ತ ಹೆಜ್ಜೆ ಇಡಬೇಕಾದ ಮಹತ್ವದ ಬಗ್ಗೆ ಸಂದೇಶ ನೀಡಿದರು.
ಮಂಗಳೂರು ಸೆಲ್ಕೊ ಇಂಡಿಯಾ ಶಾಖೆಯ ವ್ಯವಸ್ಥಾಪಕಿ ರವೀನಾ ಸೌರಶಕ್ತಿ ಆಧಾರಿತ ಜೀವನೋಪಾಯ ಯಂತ್ರಗಳ ಕುರಿತು ಸವಿಸ್ತಾರ ಮಾಹಿತಿ ನೀಡಿದರು. ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ, ಸೌರಶಕ್ತಿಯ ಆರ್ಥಿಕ ಹಾಗೂ ಪರಿಸರ ಲಾಭಗಳು ಮತ್ತು ಸೌರಶಕ್ತಿ ಬಳಸಿ ಸ್ವಉದ್ಯೋಗ ಆರಂಭಿಸಿ ಆರ್ಥಿಕ ಪ್ರಗತಿ ಸಾಧಿಸಿರುವ ಮಹಿಳೆಯರ ಅನುಭವಗಳನ್ನು ಉದಾಹರಣೆಯಾಗಿ ವಿವರಿಸಿದರು. ಸೌರಶಕ್ತಿ ಅಳವಡಿಕೆ ವಿಧಾನ, ಅದರ ನಿರ್ವಹಣೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇದರ ಉಪಯೋಗಗಳ ಕುರಿತು ಮಾಹಿತಿ ನೀಡಿದರು. ಮಂಗಳೂರು ವಿಭಾಗದ ಕೆನರಾ ಬ್ಯಾಂಕ್ ಎಫ್‌ಎಲ್‌ಸಿ ಲತೇಶ್ ಬಿ. ಬ್ಯಾಂಕ್ ಸಾಲ ಸೌಲಭ್ಯಗಳ ಕುರಿತು ಉಪನ್ಯಾಸ ನೀಡಿದರು.
ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ, ಜೀವನ ಸುರಕ್ಷಾ ಯೋಜನೆ, ವಿವಿಧ ಸಾಲ ಯೋಜನೆಗಳು, ಉಳಿತಾಯ ಖಾತೆಗಳ ಮಹತ್ವ, ಹಣಕಾಸಿನ ಶಿಸ್ತು ಹಾಗೂ ಮಹಿಳೆಯರಿಗೆ ಮತ್ತು ವಿಶೇಷ ಅಗತ್ಯವಿರುವ ಫಲಾನುಭವಿಗಳಿಗೆ ಲಭ್ಯವಿರುವ ಬ್ಯಾಂಕಿಂಗ್ ಸೌಲಭ್ಯಗಳ ಕುರಿತು ಸರಳವಾಗಿ ಮಾಹಿತಿ ನೀಡಿದರು. ಬ್ಯಾಂಕ್ ಖಾತೆ ನಿರ್ವಹಣೆ ಮತ್ತು ಉಳಿತಾಯದ ಅಭ್ಯಾಸದ ಅಗತ್ಯತೆಯನ್ನು ಒತ್ತಿಹೇಳಿದ ಅವರು, ಮಹಿಳೆಯರಿಗಾಗಿ ಕೆನರಾ ಎಂಜಲ್ ಖಾತೆ (ಕ್ಯಾನ್ಸರ್ ಪೀಡಿತರಿಗೆ) ತೆರೆಯುವ ಬಗ್ಗೆ ವಿವರಣೆ ನೀಡಿದರು.
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ, ಘಟಕದ ಮಾಜಿ ಅಧ್ಯಕ್ಷ ಜಗದೀಶ್ಚಂದ್ರ ಡಿ.ಕೆ. ಕಾರ್ಯಕ್ರಮ ಉದ್ಘಾಟಿಸಿದರು. ಯುವವಾಹಿನಿಯ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದ ಅವರು, ಸಂಘಟನೆಯು ನಡೆದು ಬಂದ ಹಾದಿ ಹಾಗೂ ಸಮಾಜದ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆಯನ್ನು ಸ್ಮರಿಸಿದರು. ಪ್ರಸ್ತುತ ಅಧ್ಯಕ್ಷ ಗಿರೀಶ್ ಕೋಟ್ಯಾನ್ ಹಾಗೂ ಉದ್ಯೋಗ ಮತ್ತು ಭವಿಷ್ಯ ನಿಧಿ ನಿರ್ದೇಶಕಿ ಶುಭಲಕ್ಷ್ಮಿ ಅವರ ಸೇವಾ ಮನೋಭಾವ ಮತ್ತು ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು. ಬ್ಯಾಂಕಿಂಗ್ ವ್ಯವಸ್ಥೆ, ಸ್ವಉದ್ಯೋಗ ಅವಕಾಶಗಳು ಹಾಗೂ ಆರ್ಥಿಕ ಸ್ವಾವಲಂಬನೆಯ ಕುರಿತು ಮಾಹಿತಿ ನೀಡಿದರು.
ಮೂಡುಬಿದಿರೆ ಘಟಕದ ಮಾಜಿ ಅಧ್ಯಕ್ಷ, ಕೇಂದ್ರ ಸಮಿತಿಯ ಕ್ರೀಡಾ ನಿರ್ದೇಶಕ ಶಂಕರ್ ಕೋಟ್ಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಯುವವಾಹಿನಿಯ ಬೆಳವಣಿಗೆಯ ಪಯಣವನ್ನು ಸ್ಮರಿಸಿದರು. ಕೇವಲ ಮನರಂಜನಾ ಕಾರ್ಯಕ್ರಮಗಳಿಗಿಂತ ಜನರ ಬದುಕು ಬದಲಾಯಿಸುವ ಹಾಗೂ ಸ್ವಾವಲಂಬನೆ ಬೆಳೆಸುವ ಕಾರ್ಯಕ್ರಮಗಳ ಅಗತ್ಯತೆಯನ್ನು ಒತ್ತಿಹೇಳಿದ ಅವರು, ಇಂತಹ ಮಾಹಿತಿ ಕಾರ್ಯಕ್ರಮಗಳು ಅನೇಕ ಕುಟುಂಬಗಳ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ನೆರವಾಗುತ್ತವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಸ್ತುತ ವರ್ಷದಿಂದ ಎಲ್ಲರ ಮನದಲ್ಲಿ ಯುವವಾಹಿನಿ ಘಟಕದ ಹೆಸರನ್ನು ಮೂಡುಬಿದಿರೆಯಲ್ಲಿ ನೆನಪಿಸುವ ಯೋಜನೆ ಹಮ್ಮಿಕೊಂಡಿರುವ ಅವರು, ತಮ್ಮೊಂದಿಗೆ ಕೈಜೋಡಿಸಿ ಸಂಘಟನೆಯನ್ನು ಮುನ್ನಡೆಸುತ್ತಿರುವ ಹಿರಿಯರು, ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಕೇವಲ ಒಂದೂವರೆ ತಿಂಗಳ ಅವಧಿಯಲ್ಲಿ 12 ಕ್ಕೂ ಹೆಚ್ಚು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಾಗಿರುವುದು ಎಲ್ಲರ ಸಹಕಾರದಿಂದ ಎಂದು ತಿಳಿಸಿದರು. ಸ್ವಉದ್ಯೋಗ, ಕೌಶಲ್ಯಾಭಿವೃದ್ಧಿ ಹಾಗೂ ಸಾಮಾಜಿಕ ಸೇವೆಗಳಿಗೆ ಯುವವಾಹಿನಿ ಸದಾ ಆದ್ಯತೆ ನೀಡಲಿದೆ ಎಂದರು.
ಯುವವಾಹಿನಿ ಘಟಕದ ನಿಕಟಪೂರ್ವ ಅಧ್ಯಕ್ಷ ಮುರಳೀಧರ ಕೋಟ್ಯಾನ್, ಸಂಘಟನಾ ಕಾರ್ಯದರ್ಶಿಗಳಾದ ಭಾಗ್ಯಶ್ರೀ, ಸುಮಿತ್ರಾ, ಸದಸ್ಯರಾದ ರತ್ನಾವತಿ, ಶೋಭಾ ಸುರೇಶ್, ಸಾರ್ಥಕ್ ಒಂಟಿಕಟ್ಟೆ, ಯುವವಾಹಿನಿ ಬಜಪೆ ಘಟಕದ ಮಾಜಿ ಅಧ್ಯಕ್ಷೆ ರೇಣುಕ ಶೇಖರ್, ಕಾರ್ಯದರ್ಶಿ ಶರ್ಮಿಳಾ ಚಂದ್ರಶೇಖರ್ ಸೇರಿದಂತೆ ಅನೇಕ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಉದ್ಯಮಿಗಳು, ಕರಕುಶಲ ಕ್ಷೇತ್ರದ ಫಲಾನುಭವಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದರು.
ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕಿ ಶುಭಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.