ಮೂಡುಬಿದಿರೆ: ಕಳೆದ ಮೂರು ವರ್ಷಗಳಿಂದ ಮೂಡುಬಿದಿರೆ ನ್ಯಾಯಾಲಯದಲ್ಲಿ ಹಿರಿಯ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸಿ ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಮಧುಕರ್ ಭಾಗವತ್ ಮತ್ತು ಒಂದು ವರ್ಷ ಕಿರಿಯ ನ್ಯಾಯಾಧೀಶರಾಗಿ ಸೇವೆ ನೀಡಿ ಮೈಸೂರಿಗೆ ವರ್ಗಾವಣೆಗೊಂಡಿರುವ ಕಾವೇರಮ್ಮ ಅವರಿಗೆ ಮೂಡುಬಿದಿರೆ ವಕೀಲರ ಸಂಘದಿಂದ ಗುರುವಾರ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ನ್ಯಾಯಾಧೀಶ ಮಧುಕರ್ ಭಾಗವತ್, ದೇವರಿಗೆ ಸರಿಯಾಗಿ ಕರ್ತವ್ಯವನ್ನು ನಿರ್ವಹಿಸಿದ್ದೇನೆ. ನನ್ನ ಆತ್ಮಸಾಕ್ಷಿಗೆ ವಂಚನೆ ಮಾಡದೆ ಪ್ರಾಮಾಣಿಕವಾಗಿ ತೀರ್ಪುಗಳನ್ನು ನೀಡಿದ್ದೇನೆ. ಹಿರಿಯ ಮತ್ತು ಕಿರಿಯ ವಕೀಲರ ಸಹಕಾರ ಸದಾ ಸ್ಮರಣೀಯವಾಗಿದೆ ಎಂದರು.

ವಕೀಲರ ಪರವಾಗಿ ಮಾತನಾಡಿದ ಹಿರಿಯ ವಕೀಲ ನಾಗೇಶ್ ಶೆಟ್ಟಿ, ನ್ಯಾಯಾಲಯವು ದೇವಾಲಯವಿದ್ದಂತೆ, ನ್ಯಾಯಾಧೀಶರು ದೇವರಿದ್ದಂತೆ ಮತ್ತು ವಕೀಲರು ಅರ್ಚಕರಿದ್ದಂತೆ. ನಾವು ದೇವರ ಮೇಲೆ ನಂಬಿಕೆ ಇಟ್ಟು ನಮ್ಮ ಕಕ್ಷಿದಾರರ ಪರವಾಗಿ ವಾದ ಮಂಡಿಸುತ್ತೇವೆ. ಈ ವಾದವನ್ನು ಪರಿಶೀಲಿಸಿ ಸರಿಯಾದ ನ್ಯಾಯವನ್ನು ನೀಡುವವರು ದೇವರೆಂಬ ನ್ಯಾಯಾಧೀಶರು. ಮುಂದೆ ಮಂಗಳೂರಿನಲ್ಲಿ ಸಂಚಾರಿ ಹೈಕೋರ್ಟ್ ಪೀಠವಾದರೆ ಅಲ್ಲಿಗೆ ಅವರು ಜಡ್ಜ್ ಆಗಿ ಬರುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು. ಸಂಘದ ಅಧ್ಯಕ್ಷ ಶರತ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಬ್ಬರು ನ್ಯಾಯಾಧೀಶರು ಉತ್ತಮ ಕಾರ್ಯ ನಿರ್ವಹಣೆಯನ್ನು ನೀಡಿದ್ದಾರೆ. ಹಿರಿಯ ನ್ಯಾಯಾಧೀಶರಾಗಿರುವ ಮಧುಕರ್ ಭಾಗವತ್ ಇನ್ನೊಬ್ಬರ ಭಾವನೆಗಳು ಮತ್ತು ನೋವನ್ನು ಅರ್ಥ ಮಾಡಿಕೊಳ್ಳುವ ಮನೋಭಾವ ಹೊಂದಿದವರು. ಕಾವೇರಮ್ಮ ಅವರು ಶಿಸ್ತು ಮತ್ತು ಆತ್ಮೀಯತೆಯನ್ನು ಮೈಗೂಡಿಸಿಕೊಂಡಿದ್ದರು ಎಂದು ಶ್ಲಾಘಿಸಿದರು.

ಹಿರಿಯ ವಕೀಲರಾದ ಕೆ. ಆರ್. ಪಂಡಿತ್, ಮುರಳೀಧರ್ ಭಟ್, ವಿಜೇತ ಪಿಂಕಿ ಡೇಸಾ, ಅಶ್ವಿನಿ ಡಿಸೋಜ ಅವರು ನ್ಯಾಯಾಧೀಶರುಗಳ ಕರ್ತವ್ಯ ನಿಷ್ಠೆಯ ಬಗ್ಗೆ ಮಾತನಾಡಿದರು.

ಸಂಘದ ಉಪಾಧ್ಯಕ್ಷ ಶಾಂತಿ ಪ್ರಸಾದ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸುರೇಶ್ ಕೆ. ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಜಯಪ್ರಕಾಶ್ ವಂದಿಸಿದರು.