ಮೂಡುಬಿದಿರೆ: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಕುರ್ಬಾನಿ ಹೆಸರಿನಲ್ಲಿ ನಡೆಯುವ ಗೋ ಹತ್ಯೆ ಹಾಗೂ ಅಕ್ರಮ ಗೋ ಸಾಗಾಟವನ್ನು ತಡೆಯುವಂತೆ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದೆ.

ಮೂಡುಬಿದಿರೆ ತಾಲೂಕಿನ ವಿವಿಧ ಭಾಗಗಳಲ್ಲಿ ಗೋ ಕಳ್ಳ ಸಾಗಾಟ ಮತ್ತು ಗೋ ಹತ್ಯೆಗೆ ಸಂಬಂಧಿಸಿದಂತೆ ಈಗಾಗಲೇ ಹಲವು ಪ್ರಕರಣಗಳು ದಾಖಲಾಗಿದ್ದರೂ ಇಂತಹ ಚಟುವಟಿಕೆಗಳಿಗೆ ಇನ್ನೂ ಸಂಪೂರ್ಣ ಕಡಿವಾಣ ಬಿದ್ದಿಲ್ಲ ಎಂದು ಸಂಘಟನೆಗಳು ತಿಳಿಸಿವೆ. ಮೇ 27ರಂದು ನಡೆಯಲಿರುವ ಬಕ್ರೀದ್ ಆಚರಣೆ ಸಂದರ್ಭದಲ್ಲಿ ಹಿಂದೂಗಳ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗದಂತೆ ಗೋ ಹತ್ಯೆಗೆ ನಿರ್ಬಂಧ ಹೇರಬೇಕು ಮತ್ತು ಅಕ್ರಮ ಗೋ ಸಾಗಾಟ ತಡೆಯಲು ಆಯಕಟ್ಟಿನ ಪ್ರದೇಶಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಕಟ್ಟುನಿಟ್ಟಿನ ನಿಗಾವಹಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಇದರೊಂದಿಗೆ ಅಕ್ರಮ ಕಸಾಯಿಖಾನೆಗಳನ್ನು ಪತ್ತೆಹಚ್ಚಿ, ಗೋ ಹತ್ಯೆ ಪ್ರತಿಬಂಧಕ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಬಜರಂಗದಳ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದೆ.