ಮಂಗಳೂರು : ಗ್ರಾಹಕರ ನಿರಂತರ ಪ್ರೋತ್ಸಾಹ ಮತ್ತು ಸಿಬ್ಬಂದಿಯ ಸೇವಾ ಮನೋಭಾವದಿಂದಾಗಿ ಸಹಕಾರಿ ಸಂಘಗಳು ಉತ್ತಮ ಪ್ರಗತಿ ಸಾಧಿಸಲು ಸಾಧ್ಯ ಎಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ, ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಹೇಳಿದ್ದಾರೆ.

ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನೀರುಮಾರ್ಗ ಶಾಖೆಯ ನಾಲ್ಕನೇ ವಾರ್ಷಿಕೋತ್ಸವ ಮತ್ತು ಗ್ರಾಹಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಸಂಘವು ಕೇವಲ ಬ್ಯಾಂಕಿಂಗ್ ವ್ಯವಹಾರಕ್ಕೆ ಸೀಮಿತವಾಗದೆ, ಸಾಮಾಜಿಕ ಹೊಣೆಗಾರಿಕೆಯೊಂದಿಗೆ ನಿರಂತರ ವೈದ್ಯಕೀಯ ಶಿಬಿರಗಳನ್ನು ಆಯೋಜಿಸುತ್ತಿದೆ. ಸ್ಪರ್ಧಾತ್ಮಕ ದರದಲ್ಲಿ ವಿಮಾ ಸೌಲಭ್ಯವನ್ನೂ ನೀಡುತ್ತಿದೆ. ಶಾಖೆಯ ನಾಲ್ಕನೇ ವಾರ್ಷಿಕೋತ್ಸವದ ಪ್ರಯುಕ್ತ 500 ದಿನಗಳ ಠೇವಣಿಗೆ ಶೇಕಡಾ 10 ಮತ್ತು 1000 ದಿನಗಳ ಠೇವಣಿಗೆ ಶೇಕಡಾ 10.50 ರಷ್ಟು ವಿಶೇಷ ಬಡ್ಡಿ ದರ ನಿಗದಿಪಡಿಸಲಾಗಿದೆ. ಚಿನ್ನಾಭರಣ ಸಾಲಗಳಿಗೆ ಪ್ರತಿ ಗ್ರಾಂಗೆ ಗರಿಷ್ಠ 12,000 ರೂಪಾಯಿವರೆಗೆ ಯಾವುದೇ ಸೇವಾ ಶುಲ್ಕವಿಲ್ಲದೆ ಸಾಲ ನೀಡಲಾಗುವುದು ಎಂದು ಅವರು ಪ್ರಕಟಿಸಿದರು.

ಇದಕ್ಕೂ ಮುನ್ನ ಸಂಘದ ಗ್ರಾಹಕರು ಹಾಗೂ ಸದಸ್ಯರಾದ ಪುಟ್ಟಸ್ವಾಮಿ ಎಚ್, ಶ್ರೀಧರ, ರಾಜೇಶ್, ಶಶಿಪ್ರಭಾ ಮತ್ತು ನಾರಾಯಣ ಪೂಜಾರಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಉದ್ಘಾಟನೆ ನೆರವೇರಿಸಿ ಮಾತನಾಡಿದ ಪುಟ್ಟಸ್ವಾಮಿ ಎಚ್, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ನೀರುಮಾರ್ಗ ಪರಿಸರದಲ್ಲಿ ಅತ್ಯುತ್ತಮ ಸೇವೆ ನೀಡುತ್ತಿದ್ದು, ಸ್ಥಳೀಯರ ಅಚ್ಚುಮೆಚ್ಚಿನ ಸಂಸ್ಥೆಯಾಗಿದೆ ಎಂದು ಶ್ಲಾಘಿಸಿದರು.

ಮತ್ತೊಬ್ಬ ಸದಸ್ಯೆ ಶಶಿಪ್ರಭಾ ಮಾತನಾಡಿ, ಸಿಬ್ಬಂದಿಯ ಉತ್ತಮ ಸೇವಾ ಮನೋಭಾವವೇ ಈ ಸಂಸ್ಥೆ ಉನ್ನತ ಸ್ಥಾನಕ್ಕೇರಲು ಕಾರಣ ಎಂದರು. ದೈನಂದಿನ ವ್ಯವಹಾರಗಳಿಗೆ ಈ ಸಂಘವು ತುಂಬಾ ಉಪಯುಕ್ತವಾಗಿದ್ದು, ಶಾಖೆಗಳಲ್ಲಿ ಸಿಬ್ಬಂದಿಯ ಸಹಕಾರ ಅತ್ಯುತ್ತಮವಾಗಿದೆ ಎಂದು ಪ್ರಮೀಳಾ ಸದಾಶಿವ ಶೆಟ್ಟಿ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕ ಗೋಪಾಲ್ ಎಂ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೌಮ್ಯ ವಿಜಯ್ ಉಪಸ್ಥಿತರಿದ್ದರು. ಶಾಖೆಯ ಸಿಬ್ಬಂದಿ ಅನುಜಿತ ಸ್ವಾಗತಿಸಿದರು. ಸುಮಲತಾ ವಂದಿಸಿದರು. ಪ್ರಭಾರ ಶಾಖಾಧಿಕಾರಿ ವರುಣ್ ರಾಜ್ ಕಾರ್ಯಕ್ರಮ ನಿರೂಪಿಸಿದರು.