ಮೂಡುಬಿದಿರೆ: ರೈತರ ಹಾಗೂ ಹೈನುಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ಮೂಡುಬಿದಿರೆಯಲ್ಲಿ ಬೃಹತ್ ರೈತ ಪ್ರತಿಭಟನಾ ಜಾಥಾ ನಡೆಯಿತು. ಹಸು ಹಾಗೂ ಹಾಲಿನೊಂದಿಗೆ ಸಾಗಿದ ವಿನೂತನ ಪ್ರತಿಭಟನೆಯಲ್ಲಿ ನೂರಾರು ರೈತರು ಭಾಗವಹಿಸಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಶ್ಯಾಮಿಲಿ ಎನ್‌ಕ್ಲೇವ್ ಕಟ್ಟಡದ ಬಳಿಯಿಂದ ತಹಶೀಲ್ದಾರ್ ಕಚೇರಿಯವರೆಗೆ ಪ್ರಮುಖ ರಸ್ತೆಗಳಲ್ಲಿ ಜಾಥಾ ಸಾಗಿತು. ಕೂಲಿಯಾಳುಗಳ ಸಮಸ್ಯೆಯಿಂದ ಹೈನುಗಾರಿಕೆ ಕಷ್ಟದ ವೃತ್ತಿಯಾಗಿದ್ದು, ನಷ್ಟದ ಹಾದಿಯಲ್ಲಿರುವುದರಿಂದ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 100 ರೂಪಾಯಿಗೆ ಹೆಚ್ಚಿಸಬೇಕು ಮತ್ತು ಸರ್ಕಾರ 15 ರೂಪಾಯಿ ಪ್ರೋತ್ಸಾಹಧನ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಬಾಕಿಯಿರುವ ಪ್ರೋತ್ಸಾಹಧನವನ್ನು ಕೂಡಲೇ ಬಿಡುಗಡೆಗೊಳಿಸಬೇಕು ಹಾಗೂ ಕುಮ್ಕಿ ಭೂಮಿ ಹಕ್ಕನ್ನು ನೀಡಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.
ಅಕ್ರಮ-ಸಕ್ರಮ ಅರ್ಜಿ ವಜಾಕ್ಕೆ ಆಕ್ರೋಶ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ನ್ಯಾಯವಾದಿ, ರೈತ ಹೋರಾಟಗಾರ ಶಾಂತಿ ಪ್ರಸಾದ್ ಹೆಗ್ಡೆ, ಹೊಸ ಕಾಯ್ದೆಗಳ ತಿದ್ದುಪಡಿಗಳಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಮಿಗಿಲಾಗಿ ಅಕ್ರಮ-ಸಕ್ರಮ ಅರ್ಜಿಗಳನ್ನು ವಜಾಗೊಳಿಸಲಾಗಿದೆ. ಈ ಬಗ್ಗೆ ನಾಡಕಚೇರಿಯಿಂದಾಗಲಿ ಅಥವಾ ತಹಶೀಲ್ದಾರ್ ಕಚೇರಿಯಿಂದಾಗಲಿ ರೈತರಿಗೆ ಯಾವುದೇ ಪೂರ್ವ ಮಾಹಿತಿ ನೀಡಿಲ್ಲ. ತೇಗದ ಮರ, ಹಲಸು, ಹೆಬ್ಬಲಸು ಸೇರಿದಂತೆ ಹೆದ್ದಾರಿ ಬದಿಯ ಮರಗಳನ್ನು ದೇವಸ್ಥಾನದ ಹೆಸರಿನಲ್ಲಿ ಕೆಲವು ಗುತ್ತಿಗೆದಾರರು ಬೇರೆ ಕಡೆಗೆ ಸಾಗಿಸುತ್ತಿದ್ದಾರೆ ಎಂದು ದೂರಿದರು. ಮೂಡುಬಿದಿರೆಯಲ್ಲಿ ಕುಮ್ಕಿ ಹಕ್ಕುಗಳ ಬಗ್ಗೆ ಹಾಗೂ ನಾಡಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಆಗಸ್ಟ್ ತಿಂಗಳಲ್ಲಿ 12 ಗ್ರಾಮ ಪಂಚಾಯತ್‌ಗಳ ಮುಂದೆ ಸಾವಿರಾರು ರೈತರನ್ನು ಸೇರಿಸಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಸೌಲತ್ತುಗಳಿಂದ ವಂಚಿತರಾಗುತ್ತಿರುವ ರೈತರು
ರೈತ ಮುಖಂಡ ವಲೇರಿಯನ್ ಕುಟಿನ್ಹೊ ಮಾತನಾಡಿ, ಆರ್‌ಟಿಸಿಯಲ್ಲಿ ಬೆಳೆ ದಾಖಲಾತಿ ವರ್ಷದಿಂದ ವರ್ಷಕ್ಕೆ ಬದಲಾಗುತ್ತಿರುವುದರಿಂದ ರೈತರಿಗೆ ಸರ್ಕಾರದ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಜನಸಂಪರ್ಕ ಸಭೆಗಳೂ ರದ್ದುಗೊಂಡಿರುವುದರಿಂದ ರೈತರ ಸಮಸ್ಯೆಗಳನ್ನು ಕೇಳುವವರಿಲ್ಲದಂತಾಗಿದೆ ಎಂದರು. ಇದೇ ಸಂದರ್ಭದಲ್ಲಿ ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಅಡಿಕೆ ಹಾಗೂ ತೆಂಗಿನ ಮರಗಳಿಗೆ ಪ್ರಸ್ತುತ ನೀಡಲಾಗುತ್ತಿರುವ 12 ರೂಪಾಯಿ ಮತ್ತು 65 ರೂಪಾಯಿ ಪರಿಹಾರ ತೀರಾ ಅವೈಜ್ಞಾನಿಕವಾಗಿದ್ದು, ಪ್ರತಿ ತೆಂಗಿನ ಗಿಡಕ್ಕೆ 25,000 ರೂಪಾಯಿ ವೈಜ್ಞಾನಿಕ ಪರಿಹಾರ ಘೋಷಿಸಬೇಕು ಎಂದು ರೈತರು ಒತ್ತಾಯಿಸಿದರು. ಡೀಮ್ಡ್ ಫಾರೆಸ್ಟ್ ಪ್ರದೇಶದಲ್ಲಿ ಕೃಷಿ ಮಾಡುತ್ತಿರುವ ರೈತರಿಗೆ ಭೂಹಕ್ಕು ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಭಂಡಾರಿ, ತಾಲೂಕು ಕಾರ್ಯದರ್ಶಿ ವಸಂತ್ ಭಟ್ ಪಯ್ಯಾಡಿ, ಕಿಸಾನ್ ಪ್ರಮುಖರಾದ ಜಾಯ್ಲಸ್ ಡಿ ಸೋಜಾ, ಮಾರ್ಪಾಡಿ ಗ್ರಾಮ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ, ಕಡಂದಲೆ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕೋಟ್ಯಾನ್, ತೆಂಕ ಮಿಜಾರು ಸಂಘದ ಪ್ರಮುಖರಾದ ನೇಮಿರಾಜ್ ಶೆಟ್ಟಿ ಉಪಸ್ಥಿತರಿದ್ದರು. ಅಶ್ವಥ್ ಪಣಪಿಲ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಪ್ರತಿಭಟನೆಯಲ್ಲಿ ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು, ರೈತ ಮುಖಂಡರು, ಹೈನುಗಾರರು ಹಾಗೂ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.