ಮೂಡುಬಿದಿರೆ: ವಿದ್ಯಾಭ್ಯಾಸದ ಜತೆಗೆ ಮಕ್ಕಳಿಗೆ ಸಂಸ್ಕಾರವೂ ಅತ್ಯಂತ ಅಗತ್ಯವಾಗಿದೆ. ಸಂಸ್ಕಾರಯುತ ವಿದ್ಯೆಯನ್ನು ಪಡೆದುಕೊಂಡು ಪ್ರತಿಯೊಬ್ಬರೂ ಸ್ವತಂತ್ರರಾಗಬೇಕು ಎಂದು ಆರ್ಯ ಈಡಿಗ ಮಹಾಸಂಸ್ಥಾನ ಸೊಲೂರು ಮಠದ ಪೀಠಾಧಿಪತಿ ವಿಖ್ಯಾತಾನಂದ ಸ್ವಾಮೀಜಿ ನುಡಿದರು. ಇರುವೈಲು-ಪುಚ್ಚಮೊಗರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘದ ಆಶ್ರಯದಲ್ಲಿ ಇರುವೈಲು ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆದ ಉಚಿತ ಪುಸ್ತಕ ವಿತರಣಾ ಸಮಾರಂಭ ಹಾಗೂ ತಮ್ಮ ಷಷ್ಠಿ ಪೂರ್ತಿ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.

ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಿ: ತಾರಾನಾಥ ಪೂಜಾರಿ ಕರ್ನಾಟಕ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಇರುವೈಲು ತಾರಾನಾಥ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ತಾರಾನಾಥ ಪೂಜಾರಿ, ಜೀವನದ ಪ್ರತಿಯೊಂದು ಹಂತದಲ್ಲೂ ಸಂದರ್ಭಕ್ಕೆ ಅನುಗುಣವಾಗಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಕಲಿಕೆ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಆಸಕ್ತಿ ಹೊಂದಿರುವವರು ಐಎಎಸ್, ಐಪಿಎಸ್ ಸೇರಿದಂತೆ ಉನ್ನತ ಸೇವಾ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ನಿರಂತರ ಪ್ರಯತ್ನ ನಡೆಸಬೇಕು. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಸುವುದು ಅಗತ್ಯವಾಗಿದ್ದು, ಸರಿಯಾದ ದಿಕ್ಕಿನಲ್ಲಿ ಶ್ರಮಿಸಿದರೆ ಯಾವುದೇ ಗುರಿಯನ್ನು ಸಾಧಿಸಲು ಸಾಧ್ಯವಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ತಮ್ಮ ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಕೇವಲ ಸ್ವಾರ್ಥಕ್ಕಾಗಿ ಬಳಸದೇ, ಸಮಾಜದ ಹಾಗೂ ಲೋಕ ಕಲ್ಯಾಣಕ್ಕಾಗಿ ಬಳಸಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮ ಆಸಕ್ತಿ, ಕೌಶಲ್ಯ, ಸಾಮರ್ಥ್ಯ ಹಾಗೂ ಸ್ವಭಾವಕ್ಕೆ ಹೊಂದಿಕೆಯಾಗುವ ಶಿಕ್ಷಣದ ಮಾರ್ಗವನ್ನು ಆಯ್ಕೆ ಮಾಡಬೇಕು. ಇತರರ ಒತ್ತಡ ಅಥವಾ ಪ್ರಭಾವಕ್ಕೆ ಒಳಗಾಗಿ ನಿರ್ಧಾರ ಕೈಗೊಳ್ಳುವುದಕ್ಕಿಂತ ತಮ್ಮ ಅಂತರಂಗದ ಧ್ವನಿಗೆ ಕಿವಿಗೊಡುವುದು ಮುಖ್ಯ ಎಂದು ಅವರು ಮಾರ್ಗದರ್ಶನ ನೀಡಿದರು. ವೈದ್ಯರು, ವಿಜ್ಞಾನಿಗಳು, ವಕೀಲರು, ನಟರು ಅಥವಾ ಇತರೆ ಯಾವುದೇ ಉನ್ನತ ಹುದ್ದೆಗಳನ್ನು ಅಲಂಕರಿಸುವುದು ಮಾತ್ರ ಯಶಸ್ಸಿನ ಮಾನದಂಡವಲ್ಲ. ತಮ್ಮ ಜ್ಞಾನ ಮತ್ತು ವ್ಯಕ್ತಿತ್ವದ ಮೂಲಕ ಸಮಾಜಕ್ಕೆ ಕೊಡುಗೆ ನೀಡುವ ಗುಣಸಂಪನ್ನ ವ್ಯಕ್ತಿಗಳಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು. ಪಿಯುಸಿ ನಂತರ ಯಾವ ಕೋರ್ಸ್ ಆಯ್ಕೆ ಮಾಡಬೇಕು ಎಂಬ ಗೊಂದಲ ಸಾಮಾನ್ಯವಾಗಿದ್ದು, ಅದರ ಬಗ್ಗೆ ಅನಗತ್ಯ ಒತ್ತಡಕ್ಕೆ ಒಳಗಾಗಬಾರದು ಎಂದು ಸಲಹೆ ನೀಡಿದರು. ಶ್ರೀ ಕ್ಷೇತ್ರ ಇರುವೈಲಿನ ಪ್ರಧಾನ ಅರ್ಚಕ ಐ ರಾಘವೇಂದ್ರ ಆಸ್ರಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಕುಮಾರ್ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಗುಜರಾತ್ ಸಿಲಾಸ್ ಎಸ್‌ಡಿಎಚ್‌ಎಸ್ ಗ್ರೂಪ್ ಆಫ್ ಕಂಪೆನಿಸ್ ಚೇರ್ಮನ್ ವೆಂಕಟೇಶ್ ಎಸ್. ಪೂಜಾರಿ ಕಾಂಪೆಟ್ಟು ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು. ಪಿಯುಸಿ ಪರೀಕ್ಷೆಯಲ್ಲಿ 600 ಕ್ಕೆ 600 ಅಂಕ ಗಳಿಸಿದ ನಿಶಾ ಹಾಗೂ ಪದವಿಯಲ್ಲಿ 4ನೇ rank ಪಡೆದ ನಂದಿನಿ ಅವರನ್ನು ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಶೇ 100% ಫಲಿತಾಂಶ ದಾಖಲಿಸಿದ ಹೊಸಬೆಟ್ಟು ಪ್ರೌಢಶಾಲೆಯ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಒಟ್ಟು 2.5 ಲಕ್ಷ ರೂಪಾಯಿ ವೆಚ್ಚದಲ್ಲಿ 650 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಲಾಯಿತು. ಇದರೊಂದಿಗೆ 32 ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ತಾರಾನಾಥ ಪೂಜಾರಿ ನಗದು ಪುರಸ್ಕಾರದೊಂದಿಗೆ ವಿದ್ಯಾರ್ಥಿಗಳನ್ನು ಪುರಸ್ಕರಿಸಿದರು.

ಇರುವೈಲು ಕ್ಷೇತ್ರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷೆ ಸುಜಾತ ಜೆ. ಶೆಟ್ಟಿ ಅವರನ್ನು ಗುರುತಿಸಿ ಗೌರವಿಸಲಾಯಿತು

ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಹಿಳಾ ಘಟಕದ ಅಧ್ಯಕ್ಷೆ ದೀಪಾ ದಿನೇಶ್, ಕಾರ್ಯದರ್ಶಿ ಪ್ರಮೀಳಾ ರಾಜೇಶ್, ರೇಣುಕಾ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಅನಂತ ಭಟ್, ಹೊಸಬೆಟ್ಟು ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ , ಬಿಲ್ಲವ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬಿಲ್ಲವ ಸಂಘದ ಕಾರ್ಯದರ್ಶಿ ದಿನೇಶ್ ಪೂಜಾರಿ ಕಟ್ಟಣಿಗೆ ಸ್ವಾಗತಿಸಿದರು. ದಿನೇಶ್ ರಾಯಿ ನಿರೂಪಿಸಿದರು. ಸಂತೋಷ್ ಕುಮಾರ್ ವಂದಿಸಿದರು.