ಮೂಡುಬಿದಿರೆ: ಕೇರ್ ಚಾರಿಟೇಬಲ್ ಟ್ರಸ್ಟ್ ದ್ವಿತೀಯ ವಾರ್ಷಿಕೋತ್ಸವದಂಗವಾಗಿ ರಾಜ್ಯದ 800ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪುಸ್ತಕಗಳು ಮತ್ತು ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮವನ್ನು ಸಮಾಜ ಮಂದಿರದಲ್ಲಿ ಆಯೋಜಿಸಲಾಯಿತು. ಗಂಟಾಲಕಟ್ಟೆ ಚರ್ಚ್ ಧರ್ಮಗುರು ರೋಕ್ ಡೆಸಾ ಅಧ್ಯಕ್ಷತೆ ವಹಿಸಿ ಮಾತನಾಡಿ, ದಾನಗಳಲ್ಲಿ ವಿದ್ಯಾದಾನ ಹಾಗೂ ಸೇವೆಗಳಲ್ಲಿ ಸಮಾಜ ಸೇವೆಯೇ ಅತ್ಯಂತ ಶ್ರೇಷ್ಠವಾಗಿದ್ದು, ಇತರರ ಸೇವೆ ಮಾಡುವುದೇ ನಿಜವಾದ ಧರ್ಮವಾಗಿದೆ. ಬಡ ಕುಟುಂಬಗಳ ಕಷ್ಟಕ್ಕೆ ಸ್ಪಂದಿಸಿ ಉಚಿತ ಪುಸ್ತಕಗಳನ್ನು ವಿತರಿಸುವ ಮೂಲಕ ಶೈಕ್ಷಣಿಕ ಪ್ರಗತಿಗೆ ನೆರವಾಗುವುದರ ಜೊತೆಗೆ ಬಡವರಿಗಾಗಿ ಮನೆಗಳನ್ನು ನಿರ್ಮಿಸಿಕೊಟ್ಟು ಅನಿಲ್ ಮೆಂಡೋನ್ಸಾ ಶ್ಲಾಘನೀಯ ಕಾರ್ಯ ಮಾಡುತ್ತಿದ್ದಾರೆ. ಸ್ವಾರ್ಥದ ಕತ್ತಲೆಯಲ್ಲಿರುವ ಈ ಭೂಲೋಕಕ್ಕೆ ಇಂತಹ ಸಮಾಜಮುಖಿ ಕಾರ್ಯಗಳು ಆಶಾಕಿರಣದಂತಿವೆ. ಸಮಾಜಕ್ಕೆ ಇವರು ನೀಡಿರುವ ಉದಾರ ಮನಸ್ಸಿನ ಕೊಡುಗೆಗಳು ಮತ್ತು ಉಪಕಾರವನ್ನು ಸದಾ ಸ್ಮರಿಸಬೇಕಾಗಿದೆ ಎಂದರು. ಟ್ರಸ್ಟ್ ಸ್ಥಾಪಕ ಅನಿಲ್ ಮೆಂಡೋನ್ಸಾ ಪ್ರಾಸ್ತವಿಕವಾಗಿ ಮಾತನಾಡಿದರು. ಸಮಾಜ ಸೇವಕ ರವಿ ಕಟಪಾಡಿ, ಮೈಸೂರಿನ ಸಮರ್ಪಣಾ ಸೇವಾ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಲಯನ್ ಕುಮಾರ್, ಬೆಂಗಳೂರು ಸಪ್ತಗಿರಿ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕಿ ವಿಜಯಶಾಂತಿ, ಮೈಮುನಾ ಫೌಂಡೇಶನ್ ಸಂಸ್ಥಾಪಕ ಮೊಹಮ್ಮದ್ ಆಸಿಫ್, ಕಾರ್ಕಳದ ಸುರಕ್ಷಾ ಸೇವಾಶ್ರಮದ ಆಯಿಷಾ ಬಾನು, ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಭದ್ರತಾ ಸಿಬ್ಬಂದಿ ಲಾರೆನ್ಸ್ ಕ್ಲೆಮೆಂಟ್ ನಜರೆತ್, ಪ್ರಗತಿಪರ ರೈತ ರಾಜೇಗೌಡ ಕೆಎಸ್ ಅವರನ್ನು ಸನ್ಮಾನಿಸಲಾಯಿತು. ಮಾಧ್ಯಮ ನಿರೂಪಕಿ ಲೀಜಾ ರೊಡ್ರಿಗಸ್, ಕಲ್ಲಬೆಟ್ಟು ಮೂಡುಬಿದಿರೆಯ ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆಯ ಪ್ರಾಂಶುಪಾಲ ಸಂಗನಬಸವ ಹಿರೇಮಠ, ಮೂಡುಬಿದಿರೆ ಪುರಸಭೆಯ ಮಾಜಿ ಸದಸ್ಯ ಜೊಸ್ಸಿ ಮಿನೇಜಸ್ ಉಪಸ್ಥಿತರಿದ್ದರು. ಗಣೇಶ್ ಅಳಿಯೂರು ಕಾರ್ಯಕ್ರಮ ನಿರೂಪಿಸಿದರು.