ಮೂಡುಬಿದಿರೆ: ಇಲ್ಲಿನ ವೆಂಕಟರಮಣ ದೇವಸ್ಥಾನದ ಬಳಿಯಿರುವ ಜೋಸ್ ಫರ್ನಿಚರ್ ಆವರಣದಲ್ಲಿ ಫ್ರೆಂಡ್ಸ್ ಇಲೆವೆನ್ ಬೆದ್ರ ತಂಡದ ವತಿಯಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ತರಗತಿಯ 20 ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಯಿತು. ಫ್ರೆಂಡ್ಸ್ ಇಲೆವೆನ್ ಬೆದ್ರ ತಂಡವು ಪ್ರತಿ ವರ್ಷದಂತೆ ಈ ಬಾರಿಯೂ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಆರ್ಥಿಕವಾಗಿ ಹಿಂದುಳಿದ ಮತ್ತು ಅರ್ಹ ವಿದ್ಯಾರ್ಥಿಗಳನ್ನು ಗುರುತಿಸಿ, ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತ ಪುಸ್ತಕಗಳನ್ನು ವಿತರಿಸುವ ಮೂಲಕ ತಂಡವು ಸಮಾಜಮುಖಿ ಕಾರ್ಯವನ್ನು ಮುಂದುವರಿಸಿದೆ. ಕಾರ್ಯಕ್ರಮದ ನೇತೃತ್ವವನ್ನು ಫ್ರೆಂಡ್ಸ್ ಇಲೆವೆನ್ ಬೆದ್ರ ತಂಡದ ಗೌರವ ಅಧ್ಯಕ್ಷ ಅಶ್ವಿನ್ ಜೆ ಪಿರೇರಾ, ಅಧ್ಯಕ್ಷ ರಘುವೀರ್ ದೇವಾಡಿಗ ಹಾಗೂ ಉಪಾಧ್ಯಕ್ಷ ಪ್ರಸನ್ನ ಹೆಗ್ಡೆ ವಹಿಸಿದ್ದರು. ತಂಡದ ಪ್ರಮುಖರಾದ ಪ್ರೆಸ್ಲಿ ಜಯರಾಮ್, ಸುಧೀಂದ್ರ ಆಚಾರ್ಯ, ಸುನಿಲ್ ಗಜ, ಶರಣ್, ಅಖಿಲ್ ಕೆ ಸಾಲಿಯಾನ್, ರವೀನ್ ಗಾಣಿಗ, ತುಷಾರ್, ಐವನ್, ಶ್ರೀನಾಥ್ ಹಾಗೂ ರೋಷನ್ ಹೆಗ್ಡೆ ಉಪಸ್ಥಿತರಿದ್ದರು.