ಮೂಡುಬಿದಿರೆ: ಇಲ್ಲಿನ ಕಲ್ಲಬೆಟ್ಟುವಿನಲ್ಲಿರುವ ನ್ಯೂ ವೈಬ್ರೆಂಟ್ ಪಿಯು ಕಾಲೇಜಿನ ವತಿಯಿಂದ ನಗರದ ಕನ್ನಡ ಭವನದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಅಭಿವಿನ್ಯಾಸ ಕಾರ್ಯಕ್ರಮ ಹಾಗೂ ಕಾಲೇಜಿನ ವಿವಿಧ ಶೈಕ್ಷಣಿಕ ಸಂಘಗಳ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾಲೇಜಿನ ಟ್ರಸ್ಟಿ, ಪ್ರಾಂಶುಪಾಲ ಎಸ್. ಎನ್. ವೆಂಕಟೇಶ್ ನಾಯಕ್ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳು ಒಂದು ಸ್ಪಷ್ಟ ಗುರಿ ಇಟ್ಟುಕೊಂಡು ವೈಬ್ರೆಂಟ್ ಕಾಲೇಜಿಗೆ ದಾಖಲಾಗಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಗುರಿ ಒಂದಿದ್ದರೆ ಸಾಲದು, ತಮ್ಮ ಗುರಿಯನ್ನು ಸಾಧಿಸಲು ಶಿಸ್ತು, ಸಂಯಮ ಮತ್ತು ಸಮಯಪ್ರಜ್ಞೆಯನ್ನು ರೂಢಿಸಿಕೊಳ್ಳಬೇಕು ಎಂದರು.
ಟ್ರಸ್ಟಿ ಚಂದ್ರಶೇಖರ ರಾಜೇ ಅರಸ್ ಮಾತನಾಡಿ, ಎರಡು ವರ್ಷದ ಪಿಯುಸಿ ಶಿಕ್ಷಣವನ್ನು ವಿದ್ಯಾರ್ಥಿಗಳು ತಪಸ್ವಿಯಂತೆ ಓದಿದರೆ ಮಾತ್ರ ಸಾಧಕರಾಗಲು ಸಾಧ್ಯವಾಗುತ್ತದೆ. ವೈಬ್ರೆಂಟ್ ಕಾಲೇಜು ಆರು ಜನ ಸಮಾನ ಮನಸ್ಕರಾದ ಶಿಕ್ಷಕರು ಕಟ್ಟಿದ ಶಿಕ್ಷಣ ಸಂಸ್ಥೆಯಾಗಿದೆ. ವೈಬ್ರೆಂಟ್ ಎಂಬುದು ಬರಿ ಒಂದು ಹೆಸರಲ್ಲ, ಸಾಧಕರನ್ನು ಸೃಷ್ಟಿಸುವ ಶಿಕ್ಷಣ ಮಂದಿರವಾಗಿದೆ. ನಮ್ಮ ಮೇಲೆ ನಂಬಿಕೆ ಇಟ್ಟುಕೊಂಡು ಬಂದಿರುವ ವಿದ್ಯಾರ್ಥಿಗಳ ಸಾಧನೆಗೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ನೀಡಲು ಬಲಿಷ್ಠ ಶಿಕ್ಷಕರ ತಂಡ ಸಿದ್ಧವಿದೆ ಎಂದು ತಿಳಿಸಿದರು.
ಮತ್ತೊಬ್ಬ ಟ್ರಸ್ಟಿ ಡಾ. ಶರತ್ ಗೊರೆ, ಪಿಯುಸಿ ಅವಧಿಯಲ್ಲಿ ವಿದ್ಯಾರ್ಥಿಗಳು ಎದುರಿಸಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ನೀಟ್, ಜೆಇಇ, ಸಿಇಟಿ, ನಾಟಾ ಹಾಗೂ ಎನ್ ಡಿ ಎ ಪರೀಕ್ಷೆಗಳು ನಡೆಯುವ ವಿಧಾನ ಮತ್ತು ಅದಕ್ಕೆ ವಿದ್ಯಾರ್ಥಿಗಳು ಹೇಗೆ ತಯಾರಿ ಮಾಡಿಕೊಳ್ಳಬೇಕು ಎಂಬುದನ್ನು ಸವಿಸ್ತಾರವಾಗಿ ವಿವರಿಸಿದರು. ಟ್ರಸ್ಟಿ ಯೋಗೇಶ್ ಬೆಡೆಕರ್ ಮಾತನಾಡಿ, ವಿದ್ಯಾರ್ಥಿಗಳು ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡರೆ ಮಾತ್ರ ತರಗತಿಗಳಲ್ಲಿ ಮಾಡುವ ಪಾಠಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಸಾಧ್ಯವಿದೆ ಎಂದರು.
ಟ್ರಸ್ಟಿ ಸುಭಾಷ್ ಝಾ ಮಾತನಾಡಿ, ತಮ್ಮ ಉತ್ತಮ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳು ಎರಡು ವರ್ಷ ಕಠಿಣ ಶ್ರಮಪಡಬೇಕು. ಪ್ರತಿವಾರದ ಕೊನೆಯಲ್ಲಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು. ಟ್ರಸ್ಟಿ ಮೆಹಬೂಬ್ ಬಾಷಾ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ವೈಯುಕ್ತಿಕ ಬೆಳವಣಿಗೆಗೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ಸಂಸ್ಥೆ ನೀಡಲಿದೆ. ವಿದ್ಯಾರ್ಥಿಗಳು ಇಲ್ಲಿರುವ ಎಲ್ಲ ವ್ಯವಸ್ಥೆಯನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡು ಸಮಾಜದ ಉತ್ತಮ ಪ್ರಜೆಯಾಗಿ ಬದುಕು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಥಮ ಪಿಯುಸಿ ವಿದ್ಯಾರ್ಥಿಗಳು, ಕಾಲೇಜಿನ ಉಪನ್ಯಾಸಕರು ಮತ್ತು ಬೋಧಕೇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥ ಹರೀಶ್ ನಂಬಿಯಾರ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ವರ್ಷ ಕಾಮತ್ ಸ್ವಾಗತಿಸಿ, ಉಪನ್ಯಾಸಕ ಸತೀಶ್ ಬಂಗೇರ ವಂದಿಸಿದರು.