ಮೂಡುಬಿದಿರೆ: ಕಡಂದಲೆ ಮೈನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2026-27ನೇ ನೂತನ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವವು ಶಾಲಾ ಆವರಣದಲ್ಲಿ ಸೋಮವಾರದಂದು ಸಂಭ್ರಮದಿಂದ ಜರುಗಿತು. ಶಾಲೆಗೆ ಹೆಜ್ಜೆ ಇಟ್ಟ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕಗಳನ್ನು ವಿತರಿಸುವ ಮೂಲಕ ಅತ್ಯಂತ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ವಿದ್ಯಾರ್ಥಿಗಳಿಗೆ ಅಗತ್ಯವಿರುವ ಉಚಿತ ಬರೆಯುವ ಪುಸ್ತಕಗಳನ್ನು ಮಹಮ್ಮಾಯಿ ಸಾಂಸ್ಕೃತಿಕ ಸೇವಾಸಮಿತಿ ಸಚ್ಚೇರಿಪೇಟೆ ವತಿಯಿಂದ ಕೊಡುಗೆಯಾಗಿ ಒದಗಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಮಿತಿಯ ಅಧ್ಯಕ್ಷ ಶ್ರೀಧರ ಗೌಡ ಹಾಗೂ ಸದಸ್ಯ ಶಶಿಕಾಂತ್ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿ, ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿದರು.

ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಶೆಟ್ಟಿ ಹೋಯಿಗೆಮನೆ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಮಕ್ಕಳ ಶೈಕ್ಷಣಿಕ ಬೆಳವಣಿಗೆ ಮತ್ತು ಕಲಿಕೆಯಲ್ಲಿ ಕೇವಲ ಶಿಕ್ಷಕರಷ್ಟೇ ಅಲ್ಲದೆ ಪೋಷಕರ ಪಾತ್ರವೂ ಅಷ್ಟೇ ಪ್ರಮುಖವಾಗಿರುತ್ತದೆ. ಪೋಷಕರು ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಂಡು ಮಕ್ಕಳ ನಿರಂತರ ಕಲಿಕೆಗೆ ಪೂರಕವಾದ ಉತ್ತಮ ವಾತಾವರಣವನ್ನು ಮನೆಯಲ್ಲಿ ನಿರ್ಮಿಸಿಕೊಡಬೇಕು ಎಂದು ಕರೆ ನೀಡಿದರು. ಕಾರ್ಯದರ್ಶಿ ನಾಗರಾಜ್ ಪೂಜಾರಿ, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷ ವಸಂತ್ ಪೂಜಾರಿ, ಸದಸ್ಯ ದಯಾನಂದ ನಾಯಕ್ ಉಪಸ್ಥಿತರಿದ್ದರು. ಶಿಕ್ಷಕ ಶರಣಯ್ಯ ಕಾರ್ಯಕ್ರಮ ನಿರೂಪಿಸಿದರು, ಮುಖ್ಯ ಶಿಕ್ಷಕಿ ಲಿಡಿಯ ಸೆರವೋ ಸ್ವಾಗತಿಸಿದರು. ಶಿಕ್ಷಕಿ ಎಲಿಜಾ ಪೌಲಿನ್ ವಂದಿಸಿದರು.