ಮೂಡುಬಿದಿರೆ, ಜೂ. 4: ಕಟ್ಟಡವೊಂದಕ್ಕೆ ಶೀಟು ಅಳವಡಿಸುವ ವೇಳೆ ನಾಲ್ಕನೇ ಮಹಡಿಯಿಂದ ಕೆಳಗೆ ಬಿದ್ದು ಯುವ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಮೂಡುಬಿದಿರೆಯ ಕಡಪಳ್ಳ ಗಾಂಧಿನಗರದಲ್ಲಿ ನಡೆದಿದೆ.

ಮಾರ್ಪಾಡಿ ಗ್ರಾಮದ ಪಾದೆಮನೆ ನಿವಾಸಿ ಸಂತೋಷ್ ಅವರ ಪುತ್ರ ಶರ್ಯ ಎಸ್. ಆಚಾರ್ಯ (17) ಮೃತಪಟ್ಟವರು. ಕಡಪಳ್ಳ ಗಾಂಧಿನಗರದಲ್ಲಿರುವ ರಾಯಲ್ ಪ್ಯಾರಡೈಸ್ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಶೀಟು ಅಳವಡಿಸುವ ಕಾಮಗಾರಿಯಲ್ಲಿ ತೊಡಗಿದ್ದ ವೇಳೆ ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ಶರ್ಯ ಅವರನ್ನು ತಕ್ಷಣ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಾದರೂ, ತೀವ್ರ ರಕ್ತಸ್ರಾವ ಹಾಗೂ ಒಳಗಾಯಗಳಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಕಟ್ಟಡದ ಗುತ್ತಿಗೆದಾರ ಪ್ರವೀಣ್ ಹಾಗೂ ಮಾಲೀಕ ನೋರ್ಟ್ ಶಾಬಾ ರೇಗೋ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಮಗಾರಿ ವೇಳೆ ಕಾರ್ಮಿಕರಿಗೆ ಅಗತ್ಯ ಸುರಕ್ಷತಾ ಸಾಮಗ್ರಿಗಳನ್ನು ಒದಗಿಸದೇ ನಿರ್ಲಕ್ಷ್ಯ ವಹಿಸಿರುವುದೇ ಅವಘಡಕ್ಕೆ ಕಾರಣವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.