ಮೂಡುಬಿದಿರೆ: ಕ್ರೀಡಾ ಕ್ಷೇತ್ರದಲ್ಲಿ ಗ್ರಾಮೀಣ ಪ್ರತಿಭೆಗಳು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿರುವ ಉದಾಹರಣೆಗಳು ಹೆಚ್ಚುತ್ತಿದ್ದು, ಅಂತಹ ಯುವ ಪ್ರತಿಭೆಗಳ ಸಾಲಿನಲ್ಲಿ ಮೂಡುಬಿದಿರೆಯ ದಿವಿತ್ ವಿವೇಕ್ ಶೇಣವ ಇದೀಗ ಗಮನ ಸೆಳೆದಿದ್ದಾರೆ. ಬ್ಯಾಸ್ಕೆಟ್‌ಬಾಲ್ ಕ್ರೀಡೆಯಲ್ಲಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ದಿವಿತ್, ಕರ್ನಾಟಕದ ಭರವಸೆಯ ಆಟಗಾರರಾಗಿ ಹೊರಹೊಮ್ಮಿದ್ದಾರೆ.
ಕೇವಲ 17ನೇ ವಯಸ್ಸಿನಲ್ಲೇ ದಿವಿತ್ ಹಲವು ಗಮನಾರ್ಹ ಸಾಧನೆಗಳನ್ನು ತಮ್ಮ ಹೆಸರಿಗೆ ದಾಖಲಿಸಿಕೊಂಡಿದ್ದಾರೆ. ಬ್ಯಾಸ್ಕೆಟ್‌ಬಾಲ್ ಫೆಡರೇಷನ್ ಆಫ್ ಇಂಡಿಯಾ (BFI) ಆಯೋಜಿಸುವ ಜೂನಿಯರ್ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡವನ್ನು ಮೂರು ಬಾರಿ ಪ್ರತಿನಿಧಿಸಿರುವುದು ಅವರ ಪ್ರತಿಭೆಗೆ ಸಾಕ್ಷಿಯಾಗಿದೆ. ಅಂಡರ್-16 ವಿಭಾಗದಲ್ಲಿ ಒಂದು ಬಾರಿ ಹಾಗೂ ಅಂಡರ್-18 ವಿಭಾಗದಲ್ಲಿ ಎರಡು ಬಾರಿ ರಾಜ್ಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
2026ರ ಮೇ ತಿಂಗಳಲ್ಲಿ ಪುದುಚೇರಿಯಲ್ಲಿ ನಡೆದ 76ನೇ ಜೂನಿಯರ್ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಅಂಡರ್-18 ತಂಡದ ಉಪನಾಯಕರಾಗಿ ದಿವಿತ್ ತಂಡವನ್ನು ಮುನ್ನಡೆಸಿದರು. ರೋಚಕ ಫೈನಲ್ ಪಂದ್ಯದಲ್ಲಿ ಹರಿಯಾಣ ತಂಡವನ್ನು ಮಣಿಸಿ ಕರ್ನಾಟಕ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು. ಈ ಗೆಲುವು ಕರ್ನಾಟಕ ಬ್ಯಾಸ್ಕೆಟ್‌ಬಾಲ್ ಇತಿಹಾಸದಲ್ಲಿ ಮಹತ್ವದ ಮೈಲುಗಲ್ಲಾಗಿ ದಾಖಲಾಗಿದೆ.
ರಾಷ್ಟ್ರೀಯ ಶಿಬಿರಕ್ಕೆ ಎರಡು ಬಾರಿ ಆಯ್ಕೆ ದಿವಿತ್ ಅವರ ಕ್ರೀಡಾ ಸಾಮರ್ಥ್ಯವನ್ನು ಗುರುತಿಸಿ ಭಾರತೀಯ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಶಿಬಿರಕ್ಕೆ ಎರಡು ಬಾರಿ ಆಯ್ಕೆ ಮಾಡಲಾಗಿದೆ. ಅಂಡರ್-16 ಹಾಗೂ ಅಂಡರ್-18 ರಾಷ್ಟ್ರೀಯ ಶಿಬಿರಗಳಲ್ಲಿ ಪಾಲ್ಗೊಂಡಿದ್ದ ಅವರು ಅಂತಿಮ 12 ಸದಸ್ಯರ ಭಾರತೀಯ ತಂಡದಲ್ಲಿ ಸ್ಥಾನ ಪಡೆಯುವ ಅವಕಾಶವನ್ನು ಅಲ್ಪ ಅಂತರದಿಂದ ಕಳೆದುಕೊಂಡರೂ, ದೇಶದ ಅತ್ಯುತ್ತಮ ಯುವ ಆಟಗಾರರ ಪೈಕಿ ಒಬ್ಬರೆಂಬುದನ್ನು ಸಾಬೀತುಪಡಿಸಿದ್ದಾರೆ.
ಶಿಕ್ಷಣ ಮತ್ತು ಕ್ರೀಡೆಗೆ ಸಮಾನ ಆದ್ಯತೆ: ಮಂಗಳೂರಿನ ಲೂರ್ಡ್ಸ್ ಸೆಂಟ್ರಲ್ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪೂರ್ಣಗೊಳಿಸಿರುವ ದಿವಿತ್, ಪ್ರಸ್ತುತ ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಶಿಕ್ಷಣದ ಜೊತೆಗೆ ಕ್ರೀಡೆಯಲ್ಲಿಯೂ ಸಮಾನ ಆಸಕ್ತಿ ಮತ್ತು ಶಿಸ್ತು ಪ್ರದರ್ಶಿಸುತ್ತಿರುವುದು ಅವರ ಯಶಸ್ಸಿನ ಪ್ರಮುಖ ಕಾರಣವಾಗಿದೆ.
ಕುಟುಂಬ, ತರಬೇತುದಾರರ ಬೆಂಬಲ: ಮೂಡುಬಿದಿರೆ ಮೂಲದ ವಿವೇಕ್ ಶೇಣವ ಮತ್ತು ಸುಮನ್ ಶೇಣವ ದಂಪತಿಯ ಪುತ್ರನಾದ ದಿವಿತ್ ಅವರ ಸಾಧನೆಗೆ ಕುಟುಂಬದ ಪ್ರೋತ್ಸಾಹವೂ ಮಹತ್ವದ ಪಾತ್ರ ವಹಿಸಿದೆ. ಮಂಗಳೂರು ಬ್ಯಾಸ್ಕೆಟ್‌ಬಾಲ್ ಕ್ಲಬ್ (MBC)ನ ಮುಖ್ಯ ತರಬೇತುದಾರ ಆದಿತ್ಯ ಮಹಾಲೆ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿರುವ ಅವರು, ದಕ್ಷಿಣ ಕನ್ನಡ ಬ್ಯಾಸ್ಕೆಟ್‌ಬಾಲ್ ಅಸೋಸಿಯೇಷನ್ ಅಧ್ಯಕ್ಷ ನವೀನ್ ಶೆಟ್ಟಿ ಸೇರಿದಂತೆ ಹಲವು ಕ್ರೀಡಾ ಪೋಷಕರ ಬೆಂಬಲವನ್ನು ಪಡೆದಿದ್ದಾರೆ.
ಭವಿಷ್ಯದ ಭಾರತದ ತಾರೆ: ಕರ್ನಾಟಕದ ಪರ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ದಿವಿತ್ ವಿವೇಕ್ ಶೇಣವ ಮುಂದಿನ ದಿನಗಳಲ್ಲಿ ಭಾರತೀಯ ತಂಡದಲ್ಲಿ ಸ್ಥಾನ ಪಡೆದು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವ ಸಾಮರ್ಥ್ಯ ಹೊಂದಿದ್ದಾರೆ. ಅವರ ಪರಿಶ್ರಮ, ಶಿಸ್ತು ಮತ್ತು ಕ್ರೀಡೆಯ ಮೇಲಿನ ಸಮರ್ಪಣೆ ಯುವ ಕ್ರೀಡಾಪಟುಗಳಿಗೆ ಮಾದರಿಯಾಗಿದೆ. ಮೂಡುಬಿದಿರೆಯ ಈ ಯುವ ಪ್ರತಿಭೆ ಭಾರತೀಯ ಬ್ಯಾಸ್ಕೆಟ್‌ಬಾಲ್ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರಕ್ಕೆ ಏರಲಿ ಎಂಬುದು ಕ್ರೀಡಾಭಿಮಾನಿಗಳ ಆಶಯವಾಗಿದೆ.
ವಿಶೇಷ ವರದಿ : ಯಶೋಧರ ವಿ. ಬಂಗೇರ