ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯಲ್ಲಿ ನಡೆಸಿರುವ ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಯ ಪರಿಣಾಮ ಮಿಜಾರಿನಲ್ಲಿ ಬಯಲಾಗಿದೆ. ಮುಂಗಾರಿನ ಮೊದಲ ಭಾರಿ ಮಳೆಗೆ ಹೆದ್ದಾರಿಯ ಒಂದು ಭಾಗ ಕೊಚ್ಚಿಹೋಗಿದ್ದು, ಸಾರ್ವಜನಿಕರ ಸಂಚಾರಕ್ಕೆ ಸಂಚಕಾರವಾಗಿದೆ.
ಸ್ಥಳೀಯರ ಆರೋಪದಂತೆ, ಹೆಚ್ಚಿನ ನೀರಿನ ಹರಿವಿಗೆ ಅನುಗುಣವಾಗಿ ದೊಡ್ಡ ಮೋರಿ ನಿರ್ಮಿಸಬೇಕಿದ್ದ ಸ್ಥಳದಲ್ಲಿ ಅತ್ಯಂತ ಸಣ್ಣ ಗಾತ್ರದ ಮೋರಿ ನಿರ್ಮಿಸಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಪರಿಣಾಮವಾಗಿ ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ರಸ್ತೆಯ ಕೆಳಭಾಗದ ಮಣ್ಣು ಮತ್ತು ಜಲ್ಲಿಕಲ್ಲುಗಳನ್ನು ಕೊಚ್ಚಿಕೊಂಡು ಹೋಗಿದ್ದು, ರಸ್ತೆ ಕುಸಿತಕ್ಕೆ ಕಾರಣವಾಗಿದೆ.
ರಸ್ತೆಯ ಅಡಿಭಾಗದ ಮಣ್ಣು ಕೊಚ್ಚಿಹೋಗಿರುವುದರಿಂದ ರಸ್ತೆ ಯಾವುದೇ ಕ್ಷಣದಲ್ಲಿ ಮತ್ತಷ್ಟು ಕುಸಿಯುವ ಅಪಾಯ ಎದುರಾಗಿದೆ. ತೆಂಕ ಮಿಜಾರು ಪರಿಸರದ ಒಟ್ಟು ಮೂರು ಕಡೆಗಳಲ್ಲಿ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದೆ.
ಅಪಾಯಕಾರಿ ಸ್ಥಿತಿಯ ನಡುವೆಯೂ ವಾಹನಗಳು ಸಂಚರಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ. ವಿಶೇಷವಾಗಿ ಬೊಲೆರೊ ವಾಹನ ಸೇರಿದಂತೆ ಹಲವು ವಾಹನಗಳು ನೀರಿನ ರಭಸದ ನಡುವೆ ಸಂಚರಿಸುತ್ತಿರುವ ದೃಶ್ಯಗಳು ಸ್ಥಳೀಯರ ಕಳವಳಕ್ಕೆ ಕಾರಣವಾಗಿವೆ.
ಸ್ಥಳೀಯ ನಿವಾಸಿಗಳು ಹಾಗೂ ವಾಹನ ಸವಾರರು ಡಿಬಿಎಲ್ ಕಂಪನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಹಾನಿಗೊಳಗಾದ ಭಾಗಗಳನ್ನು ತುರ್ತಾಗಿ ದುರಸ್ತಿಗೊಳಿಸಿ, ಮಳೆಗಾಲದಲ್ಲಿ ಸಂಭವಿಸಬಹುದಾದ ದೊಡ್ಡ ಅನಾಹುತಗಳನ್ನು ತಡೆಯುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
"ಮುಂಗಾರಿನ ಮೊದಲ ಮಳೆಯನ್ನೇ ತಡೆದುಕೊಳ್ಳಲಾಗದ ಹೆದ್ದಾರಿ ಕಾಮಗಾರಿಯ ಗುಣಮಟ್ಟ ಹೇಗಿದೆ? ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡಿದ ಕಳಪೆ ಕಾಮಗಾರಿಗೆ ಯಾರು ಹೊಣೆ?" ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.