ಮೂಡುಬಿದಿರೆ: ಇಲ್ಲಿನ ಕಡಲಕೆರೆಯ ಸೇವಾಂಜಲಿ ಎಜುಕೇಶನಲ್ ಟ್ರಸ್ಟ್ ಪ್ರವರ್ತಿತ ಪ್ರೇರಣಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಜಾ ಕಾಲದ ನಂತರದ ಶಾಲಾ ಪ್ರಾರಂಭೋತ್ಸವವು ವಿಶಿಷ್ಟವಾಗಿ ಜರುಗಿತು. ಸರ್ಕಾರಿ ನಿಯಮದಂತೆ ಶಾಲೆಗೆ ತಳಿರು ತೋರಣ ಕಟ್ಟಿ, ಹಬ್ಬದ ವಾತಾವರಣ ನಿರ್ಮಿಸಲಾಗಿತ್ತು. ಶಾಲೆಗೆ ಬಂದ ಎಲ್ಲಾ ವಿದ್ಯಾರ್ಥಿಗಳನ್ನು ಹಾರ್ದಿಕವಾಗಿ ಸ್ವಾಗತಿಸಲಾಯಿತು. ಭಾರತೀಯ ಸಂಸ್ಕೃತಿಯಂತೆ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ ತಿಲಕವಿಟ್ಟು ಹಾಗೂ ವಿದ್ಯಾರ್ಥಿನಿಯರಿಗೆ ಕೈಬಳೆ ತೊಡಿಸಿ, ತಿಲಕವಿಟ್ಟು ಬರಮಾಡಿಕೊಳ್ಳಲಾಯಿತು. ವಿದ್ಯಾರ್ಥಿಗಳು ಭಾರತ ಮಾತೆ ಮತ್ತು ವಿದ್ಯಾದಾಯಿನಿ ಸರಸ್ವತಿ ದೇವರಿಗೆ ಪುಷ್ಪಾರ್ಚನೆ ಮಾಡಿ ಶಾಲೆಯನ್ನು ಪ್ರವೇಶಿಸಿದರು.

ಮುಂದಿನ ಶಿಕ್ಷಣವು ಸಾಂಗವಾಗಿ ನೆರವೇರಲಿ ಎಂಬ ಉದ್ದೇಶದಿಂದ ಶಾಲಾ ಆರಂಭದಲ್ಲಿ ಅಗ್ನಿಹೋತ್ರ ಹೋಮವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಶಿಕ್ಷಕಿ ವತ್ಸಲಾ ರಾಜೇಶ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಮನಸ್ವೀ ಶರ್ಮ, ಸಾಧ್ಯ ಹಾಗೂ ಚಿನ್ಮಯ ಭಟ್ ವಿಧ್ಯುಕ್ತವಾಗಿ ಮಂತ್ರ ಜಪಿಸಿ ಹೋಮ ನೆರವೇರಿಸಿದರು. ಹೋಮಕುಂಡದಲ್ಲಿ ಸಾಂಪ್ರದಾಯಿಕ ಸಮಿಧೆ ಹಾಗೂ ತುಪ್ಪವನ್ನು ಬಳಸಲಾಯಿತು. ಹೊಸದಾಗಿ ಶಾಲೆಗೆ ಸೇರ್ಪಡೆಯಾದ ವಿದ್ಯಾರ್ಥಿಗಳು ಹಿರಿಯರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೇರಣಾ ಶಾಲೆಯ ಸಂಚಾಲಕ ಎಂ. ಶಾಂತರಾಮ ಕುಡ್ವ ಮಾತನಾಡಿ, ಅಗ್ನಿಹೋತ್ರದ ಮೂಲಕ ಶಾಲಾ ಚಟುವಟಿಕೆ ಪ್ರಾರಂಭಿಸಿರುವುದು ಸಕಾಲಿಕವಾಗಿದೆ ಎಂದರು. ಹೋಮಗಳಲ್ಲಿ ಅತ್ಯಂತ ಸಣ್ಣ ಹೋಮ ಎನಿಸಿರುವ ಅಗ್ನಿಹೋತ್ರವು ಹೆಚ್ಚಿನ ಫಲದಾಯಕವಾಗಿದೆ. ಇದರ ಮೂಲಕ ವಾತಾವರಣ ಶುದ್ಧಿಯಾಗುತ್ತದೆ ಹಾಗೂ ವಿಕಿರಣದಂತಹ ವಿನಾಶಕಾರಿಯನ್ನು ತಡೆಗಟ್ಟುವ ಶಕ್ತಿ ಈ ಹೋಮಕ್ಕಿದೆ ಎಂಬುದನ್ನು ವಿಜ್ಞಾನಿಗಳೂ ಒಪ್ಪಿದ್ದಾರೆ ಎಂದು ತಿಳಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಸೇವಾಂಜಲಿ ಎಜುಕೇಶನಲ್ ಟ್ರಸ್ಟ್ ಉಪಾಧ್ಯಕ್ಷ ಸೋಮನಾಥ ಕೋಟ್ಯಾನ್ ಅಗ್ನಿಹೋತ್ರದ ಮಹತ್ವವನ್ನು ವಿವರಿಸಿದರು. ಸುಮಾರು 30 ವರ್ಷಗಳ ಹಿಂದೆ ಪೋಖ್ರನ್‌ನಲ್ಲಿ ಸಂಭವಿಸಿದ ಭೀಕರ ಅಣುವಿಕಿರಣ ಸಂದರ್ಭದಲ್ಲಿ ಎಲ್ಲೆಲ್ಲೂ ಅನಾಹುತ ಆದಾಗ, ಅಲ್ಲೇ ಹತ್ತಿರದಲ್ಲಿದ್ದ ಒಂದು ಮನೆಗೆ ಯಾವುದೇ ತೊಂದರೆಯಾಗಲಿಲ್ಲ. ಆ ಮನೆಯಲ್ಲಿ ದಿನಂಪ್ರತಿ ಅಗ್ನಿಹೋತ್ರ ಹೋಮ ಜರುಗುತ್ತಿದ್ದುದೇ ಇದಕ್ಕೆ ಕಾರಣ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ಹೇಳಿದರು.

ಟ್ರಸ್ಟ್ ಸದಸ್ಯ ಆನಂದ ಕಾರ್ಲ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ವತ್ಸಲಾ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.